ಪುತ್ತೂರು: ನಿಯಮಕ್ಕೆ ವಿರುದ್ಧವಾಗಿ ಬ್ರಹ್ಮರಕೋಟ್ಲು ಟೋಲ್ ಗೇಟ್ ತೆರವುಗೊಳಿಸದೇ ಬಜತ್ತೂರಿನಲ್ಲಿ ಹೊಸ ಟೋಲ್ ಆರಂಭಿಸಿದರೆ ಉಗ್ರ ಹೋರಾಟ ಆರಂಭಿಸಲಾಗುವುದು ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್‌ನಿಂದ ಅಡ್ಡಹೊಳೆವರೆಗಿನ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ವಳಾಲಿನಲ್ಲಿ ಹೊಸ ಟೋಲ್ ಪ್ಲಾಜಾ ನಿರ್ಮಾಣ ಮಾಡುತ್ತಿರುವುದು ಸಾರ್ವಜನಿಕರ ಹಿತಾಸಕ್ತಿ ಮತ್ತು ಹೆದ್ದಾರಿ ಪ್ರಾಧಿಕಾರದ ಕನಿಷ್ಠ 60 ಕಿಲೋ ಮೀಟರ್ ಅಂತರದಲ್ಲಿ ಟೋಲ್ ಸಂಗ್ರಹ ಮಾಡಬೇಕು ಎಂಬ ನಿಯಮಕ್ಕೆ ವಿರುದ್ಧವಾಗಿದೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಈಗಾಗಲೇ ಅವೈಜ್ಞಾನಿಕವಾಗಿ ಕಾರ್ಯಾಚರಿಸುತ್ತಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್ ಅನ್ನು ಬಂದ್ ಮಾಡಬೇಕೆಂದು ಜಿಲ್ಲೆಯ ಜನತೆ ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ ಜನರ ನ್ಯಾಯಯುತ ಬೇಡಿಕೆಗೆ ಮನ್ನಣೆ ನೀಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI), ಈಗ ಬಜತ್ತೂರು ಗ್ರಾಮದ ವಳಾಲಿನಲ್ಲಿ ಮತ್ತೊಂದು ಟೋಲ್ ಹೇರಲು ಮುಂದಾಗಿರುವುದು ಹೆದ್ದಾರಿ ಪ್ರಾಧಿಕಾರವು ಲೂಟಿ ಹೊಡೆಯುವ ಮತ್ತು ಹಗಲು ದರೋಡೆಯ ತಂತ್ರವಾಗಿದೆ” ಎಂದು ಕಿಡಿಕಾರಿದ್ದಾರೆ.
ಮಂಗಳೂರು-ಬೆಂಗಳೂರು ನಡುವೆ ಈಗಾಗಲೇ ನೆಲಮಂಗಲದಿಂದ ಸಕಲೇಶಪುರ ಮಧ್ಯೆ 5 ಟೋಲ್‌ಗಳಿದ್ದು, ಈಗ ಬಜತ್ತೂರು ಸೇರಿದರೆ ಒಟ್ಟು 7 ಟೋಲ್‌ಗಳಾಗಲಿವೆ. ಇದು ಸಾರ್ವಜನಿಕರ ಜೇಬಿಗೆ ಹಾಕುತ್ತಿರುವ ಕತ್ತರಿಯಾಗಿದೆ.
ಜಿಲ್ಲೆಯ ಒಳಭಾಗದಲ್ಲಿರುವ ಬ್ರಹ್ಮರಕೊಟ್ಲು ಟೋಲ್ ಗೇಟ್ ಅತ್ಯಂತ ಅವೈಜ್ಞಾನಿಕವಾಗಿದೆ. ಅದನ್ನು ಮೊದಲು ಶಾಶ್ವತವಾಗಿ ಸ್ಥಗಿತಗೊಳಿಸಬೇಕು. ಆ ಬಳಿಕವಷ್ಟೇ ಹೊಸ ಟೋಲ್ ಬಗ್ಗೆ ಮಾತನಾಡಬೇಕು.ರಸ್ತೆ ಕಾಮಗಾರಿ ಇನ್ನೂ ನೂರಕ್ಕೆ ನೂರರಷ್ಟು ಪೂರ್ಣಗೊಂಡಿಲ್ಲ. ವೈಜ್ಞಾನಿಕವಾಗಿ ರಸ್ತೆ ಸಿದ್ಧವಾಗುವ ಮೊದಲೇ ಟೋಲ್ ಸಂಗ್ರಹಕ್ಕೆ ಮುಂದಾದರೆ ಜನಸಾಮಾನ್ಯರನ್ನು ಸಂಘಟಿಸಿ ಎಸ್‌ಡಿಪಿಐ ತೀವ್ರ ಪ್ರತಿರೋಧ ಒಡ್ಡಲಿದೆ.ಒಂದು ವೇಳೆ ಟೋಲ್ ಆರಂಭವಾದರೂ ಸ್ಥಳೀಯ ವಾಹನಗಳಿಗೆ ಯಾವುದೇ ಶುಲ್ಕವಿಲ್ಲದೆ ಸಂಪೂರ್ಣ ವಿನಾಯಿತಿ ನೀಡಬೇಕು ಎಂಬುದು ನಮ್ಮ ಕಟ್ಟುನಿಟ್ಟಿನ ಬೇಡಿಕೆಯಾಗಿದೆ.
ಬಜತ್ತೂರು ಟೋಲ್ ಪ್ಲಾಜಾ ಆರಂಭಿಸುವ ಮುನ್ನ ಬ್ರಹ್ಮರಕೊಟ್ಲು ಟೋಲ್ ಅನ್ನು ತೆರವುಗೊಳಿಸದಿದ್ದರೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಾರ್ವಜನಿಕರ ಉಗ್ರ ಹೋರಾಟವನ್ನು ಎದುರಿಸಬೇಕಾದೀತು ಎಂದು ಅನ್ವರ್ ಸಾದತ್ ಬಜತ್ತೂರು ಎಚ್ಚರಿಸಿದ್ದಾರೆ.


























