ಮಂಗಳೂರು: ಕರಾವಳಿ ಪ್ರದೇಶದಲ್ಲಿ ತೀವ್ರವಾಗಿ ಹಬ್ಬಿದ್ದ ಡ್ರಗ್ಸ್ ಜಾಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ನಿರಂತರವಾಗಿ ಕೈಗೊಳ್ಳುತ್ತಿರುವ ಕಾರ್ಯಾಚರಣೆಗಳು ಶ್ಲಾಘನೀಯ.
ನಿನ್ನೆಯ ದಿನ ಯಾವುದೇ ಮುನ್ಸೂಚನೆ ನೀಡದೆ 200 ಕ್ಕೂ ಅಧಿಕ ಕಾಲೇಜು ವಿದ್ಯಾರ್ಥಿಗಳನ್ನು ದಿಢೀರ್ ಆಗಿ ಡ್ರಗ್ಸ್ ತಪಾಸಣೆಗೆ ಒಳಪಡಿಸಿದ್ದು ನಿಜಕ್ಕೂ ಪ್ರಶಂಸನೀಯ. ಇಂತಹ ಕಾರ್ಯಾಚರಣೆಗಳು ಕ್ಯಾಂಪಸ್‌ನಲ್ಲಿ ಹಬ್ಬುತ್ತಿರುವ ಡ್ರಗ್ಸ್ ಮಾಫಿಯಾವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಲಿದೆ. ಮಂಗಳೂರು ಪೊಲೀಸ್ ಇತಿಹಾಸದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನೇರವಾಗಿ ಕಾರ್ಯಾಚರಣೆ ನಡೆಸಿದ್ದು ಇದೇ ಮೊದಲಾಗಿದೆ. ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ನಡೆಸುವ ಇಂತಹ ಡ್ರಗ್ಸ್ ಪರೀಕ್ಷೆಯ ಕಾರ್ಯಾಚರಣೆಗಳು ನಿಯಮಿತವಾಗಿ ಮುಂದುವರಿಯಲಿ.
‘ಎಜ್ಯುಕೇಶನ್ ಹಬ್’ ಎನಿಸಿಕೊಂಡಿರುವ ಮಂಗಳೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹೊರ ಜಿಲ್ಲೆ, ಹೊರ ರಾಜ್ಯಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಚಾಕಲೇಟ್ ಕೊಂಡಂತೆ ಸುಲಭವಾಗಿ ಕಿಕ್ಕು ಬರಿಸುವ ವಸ್ತುಗಳು ಇಲ್ಲಿನ ವಿದ್ಯಾರ್ಥಿಗಳ ಕೈಸೇರುತ್ತಿವೆ. ಇದರ ಹಿಂದೆ ವ್ಯವಸ್ಥಿತವಾದ ಜಾಲವೇ ಇದೆ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಅವರನ್ನು ಬಲಿಪಡೆಯುತ್ತಿದೆ. ಕೇರಳದಿಂದ ಅವ್ಯಾಹತವಾಗಿ ಡ್ರಗ್ಸ್ ಸರಬರಾಜು ಇಲ್ಲಿ ಆಗುತ್ತಿದೆ. ಇಂತಹ ಪೆಡ್ಲರ್‌ಗಳನ್ನು ಮಟ್ಟ ಹಾಕಬೇಕಿದೆ. ಸರ್ಕಾರವು ಆ್ಯಂಟಿ ಡ್ರಗ್ಸ್ ದಳವನ್ನು ಸ್ಥಾಪಿಸಿ ಮಾದಕವಸ್ತು ಜಾಲದ ಸಂಪೂರ್ಣ ಮೂಲೋತ್ಪಾಟನೆ ಮಾಡಬೇಕು.
ಮಕ್ಕಳು, ಯುವಸಮೂಹ ಮಾದಕ ವ್ಯಸನಕ್ಕೆ ತುತ್ತಾಗದಂತೆ ಇರಬೇಕಾದರೆ ಪಾಲಕರು, ಶಿಕ್ಷಕರು, ನಾಗರಿಕರು ಹೆಚ್ಚಿನ ಪಾತ್ರ ವಹಿಸಬೇಕಿದೆ. ಡ್ರಗ್ಸ್ ವಿರುದ್ಧ ಸಮರದಲ್ಲಿ ಪೊಲೀಸ್ ಇಲಾಖೆಯ ಜತೆ ಸಾರ್ವಜನಿಕರೂ ಕೈಜೋಡಿಸಬೇಕಿದೆ. ಸಧೃಡ ಸಮಾಜ ನಮ್ಮದಾಗುವಂತೆ ಮಾಡಲು ಪ್ರತಿಯೊಬ್ಬರೂ ಸಾಮಾಜಿಕ ಹೊಣೆ ಹೊರಬೇಕಿದೆ.


























