ಶಿರಸಿಯಲ್ಲಿ ಜನವರಿ 22 ರಿಂದ 26 ರವರೆಗೆ ಶಿರಸಿ ರೋಟರಿ ಕ್ಲಬ್ ಆಯೋಜಿಸಿದ ಆಹಾರ ಮೇಳ ಹಾಗೂ ಆಲೆಮನೆ ಉತ್ಸವ – 2026 ಕಾರ್ಯಕ್ರಮದಲ್ಲಿ ಉತ್ತರಕನ್ನಡ ಜಿಲ್ಲೆಯ ದಿವ್ಯಾಂಗರ ನೇತೃತ್ವದಲ್ಲಿ ಸೇವಾಧಾಮದಿಂದ ಪುನಶ್ಚೇತನಗೊಂಡ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ತಯಾರಿಸಿದ ವಿವಿಧ ಕರಕುಶಲ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಮಳಿಗೆಯಲ್ಲಿ ದಿವ್ಯಾಂಗರಿಂದ ತಯಾರಿಸಲಾದ ಹತ್ತಿಯಿಂದ ಬತ್ತಿ, ಉಲ್ಲನ್ ಸ್ವೇಟರ್‌ಗಳು, ಬ್ಯಾಗ್‌ಗಳು, ಟೆಡ್ಡಿ, ಕೀ ಚೈನ್, ಕೌದಿ, ಬಾಗಿಲ ತೋರಣ, ಅರಿಶಿನಪುಡಿ, ರೊಟ್ಟಿ, ಹಣ್ಣು–ಹೂವಿನ ಬುಟ್ಟಿ, ಫ್ಲೋರ್ ಮ್ಯಾಟ್, ಜೋಕಾಲಿ ಮುಂತಾದ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲಾಯಿತು. ಉತ್ಸವದ ಭಾಗವಾಗಿ ಮಿರ್ಚಿ ಮಂಡಕ್ಕಿ ಸ್ಟಾಲ್ ಕೂಡ ಆಯೋಜಿಸಲಾಗಿದ್ದು, ಐದು ದಿನಗಳ ಅವಧಿಯಲ್ಲಿ ಸುಮಾರು 40,000ರ ವ್ಯಾಪಾರ ನಡೆಯಿತು. ಇದು ಕಾರ್ಯಕ್ರಮದ ಯಶಸ್ಸಿನೊಂದಿಗೆ ದಿವ್ಯಾಂಗರ ಆತ್ಮವಿಶ್ವಾಸದ ಸ್ಪಷ್ಟ ಉದಾಹರಣೆಯಾಗಿದೆ.
ಉತ್ಸವದ ಸಂದರ್ಭದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಹಾಗೂ ಶಿರಸಿ–ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ್ ರವರು ಮಳಿಗೆಯನ್ನು ಭೇಟಿ ನೀಡಿ ಸೇವಾಭಾರತಿಯ ಕಾರ್ಯವನ್ನು ಮೆಚ್ಚಿದರು. ಜೊತೆಗೆ ಶಿರಸಿ ರೋಟರಿ ಕ್ಲಬ್‌ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಹಾಗೂ ಸೇವಾಭಾರತಿ ಸಂಸ್ಥೆಯು ಶಿರಸಿಯಲ್ಲಿ ಆಯೋಜಿಸಿದ ವೈದ್ಯಕೀಯ ಶಿಬಿರಕ್ಕೆ ಸಹಕರಿಸಿದ್ದ ಡಾ. ದಿನೇಶ್ ಹೆಗ್ಡೆ, ಡಾ. ಸುಮನ್ ಹೆಗ್ಡೆ, ಡಾ. ಕೈಲಾಶ್ ಪೈ, ಶ್ರೀ ಮಹೇಶ್ ತೆಲಂಗ, ಶ್ರೀ ರವಿ ಹೆಗ್ಡೆ,ಗಡಿಹಳ್ಳಿ, ಡಾ. ರೋಹಿತ್ ಹೆಗ್ಡೆ, ಡಾ. ರಾಯ್ಸದ್ ಮತ್ತು ಡಾ. ವಿನಯ ಹೆಗ್ಡೆ ಮುಂತಾದವರು ಮಳಿಗೆಯನ್ನು ಸಂದರ್ಶಿಸಿದರು.
ಉತ್ಸವಕ್ಕೆ ಆಗಮಿಸಿದ ಜನಸಮೂಹದ ನಡುವೆ ಸೇವಾಭಾರತಿ ಸಂಸ್ಥೆಯ ಉದ್ದೇಶಗಳು, ಸೇವಾಧಾಮದಲ್ಲಿ ನಡೆಯುವ ದಿವ್ಯಾಂಗರ ಪುನಶ್ಚೇತನ ಕಾರ್ಯಗಳು ಹಾಗೂ ಬೆನ್ನುಹುರಿ ಅಪಘಾತದ ಬಗ್ಗೆ ಜಾಗೃತಿ ಮೂಡಿಸಲಾಯಿತು.


























