ಬೆಂಗಳೂರು: ಮೊಮ್ಮಗ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಉಂಟುಮಾಡಿರುವ ಚಿಂತೆ ಹಾಗೂ ಒತ್ತಡದ ದೆಸೆಯಿಂದ ಮಾಜಿ ಪ್ರಧಾನಿ ದೇವೇಗೌಡರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ ದೇವೇಗೌಡ ಕುಟುಂಬದ ಸದಸ್ಯರು ಅಲರ್ಟ್ ಆಗಿದ್ದು, ತೀವ್ರ ನಿಗಾ ಇರಿಸಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು, ಹಿರಿಮಗ ಹಾಗೂ ಮೊಮ್ಮಗನ ಹಗರಣಗಳಿಂದಾಗಿ ತೀವ್ರವಾಗಿ ನೊಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಈ ಪ್ರಕರಣದಲ್ಲಿ ಕೈ ತೊಳೆದುಕೊಂಡು ಬೆನ್ನು ಹತ್ತಿರುವುದು ಇನ್ನಷ್ಟು ಚಿಂತೆ ಮೂಡಿಸಿದೆ. ಇದರಿಂದಾಗಿ, ಇತ್ತೀಚೆಗೆ ತಾನೇ ಆಗಿರುವ ಬಿಜೆಪಿ- ಜೆಡಿಎಸ್ ಮೈತ್ರಿಯ ಮೇಲೂ ದುಷ್ಪರಿಣಾಮ ಆಗುವ ಸಾಧ್ಯತೆಯೂ ಅವರನ್ನು ಬಾಧಿಸುತ್ತಿದೆ.
ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಪತ್ನಿ ಚೆನ್ನಮ್ಮ ಆರೋಗ್ಯದ ಬಗ್ಗೆಯೂ ಕುಟುಂಬದ ಸದಸ್ಯರು ತೀವ್ರ ನಿಗಾ ವಹಿಸುತ್ತಿದ್ದಾರೆ. ಹೆಣ್ಣು ಮಕ್ಕಳು ಸಂಪೂರ್ಣ ಮೇಲ್ವಿಚಾರಣೆ ಹೊತ್ತಿದ್ದಾರೆ. ಬೆಳಿಗ್ಗೆ ಹಾಗೂ ಸಂಜೆ ಎರಡೂ ಟೈಮ್ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. “ಟಿವಿ ನೋಡಬೇಡಿ.. ಸಂಪೂರ್ಣ ರೆಸ್ಟ್ ಮಾಡಿ” ಎಂದು ದೇವೇಗೌಡರಿಗೆ ವೈದ್ಯರು ಕೂಡ ಸಲಹೆ ನೀಡಿದ್ದಾರೆ. ನಿನ್ನೆ ದೇವೇಗೌಡರ ಅಳಿಯ, ಹೃದಯ ತಜ್ಞ ಡಾ. ಸಿ.ಎನ್ ಮಂಜುನಾಥ್ ಗೌಡರ ಮನೆಗೆ ಭೇಟಿ ನೀಡಿ ನಿಯಮಿತ ತಪಾಸಣೆ ನಡೆಸಿದ್ದಾರೆ. ಇತರ ನುರಿತ ವೈದ್ಯರಿಂದಲೂ ತಪಾಸಣೆ ನಡೆದಿದೆ. ಪುತ್ರಿಯರು ದೇವೇಗೌಡರ ಮನೆಯಲ್ಲಿಯೇ ಉಳಿದುಕೊಂಡಿದ್ದು, ದೇವೇಗೌಡರ ಕೋಣೆಯಲ್ಲಿ ಒಬ್ಬ ವ್ಯಕ್ತಿಯನ್ನು ಸದಾ ನೋಡಿಕೊಳ್ಳಲು ಇರಿಸಿದ್ದಾರೆ.