ಬೆಂಗಳೂರು: ಗುಜರಾತ್ ಟೈಟನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 4 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದೆ. ಆದರೆ ಪಂದ್ಯದ ಒಂದು ಹಂತದಲ್ಲಿ ದಿಢೀರನೆ ಬ್ಯಾಟಿಂಗ್ ಕುಸಿತ ಕಂಡಿದ್ದರ ಬಗ್ಗೆ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.148 ರನ್ ಗಳ ಗುರಿ ಹಿಂಬಾಲಿಸಿದ ಆರ್ ಸಿಬಿ ನಾಯಕ ಫಾಫ್ ಡುಪ್ಲೆಸಿಸ್ (64 ರನ್) ಹಾಗೂ ವಿರಾಟ್ ಕೊಹ್ಲಿ (42ರನ್) ಅವರು ಮೊದಲ ವಿಕೆಟ್ ಗೆ 92 ರನ್ ಗಳ ಜೊತೆಯಾಟ ನೀಡಿದ್ದರು. ಆದರೆ 116 ರನ್ ಗಳಾಗುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು.
ಆದರೆ 7ನೇ ವಿಕೆಟ್ ಗೆ ಜೊತೆಗೂಡಿದ ದಿನೇಶ್ ಕಾರ್ತಿಕ್ (21* ರನ್) ಹಾಗೂ ಸ್ವಪ್ನಿಲ್ ಸಿಂಗ್ (15* ರನ್) ಎಚ್ಚರಿಕೆಯ ಆಟವಾಡಿದರು. ರಶೀದ್ ಖಾನ್ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಸ್ವಪ್ನಿಲ್ ಸಿಂಗ್ ಆರ್ ಸಿಬಿ 13.4 ಓವರ್ ಗಳಲ್ಲೇ 152 ರನ್ ಗಳಿಸಿ 4 ವಿಕೆಟ್ ಗಳ ಜಯದೊಂದಿಗೆ ಅಂಕಪಟ್ಟಿಯಲ್ಲಿ ಶುಭಮನ್ ಗಿಲ್ ಸಾರಥ್ಯದ ಗುಜರಾತ್ ಟೈಟನ್ಸ್ ಅನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೆ ಜಿಗಿತ ಕಂಡಿತು.
ಈ ಪಿಚ್ ನಲ್ಲಿ 180-190 ಸ್ಕೋರ್ ಉತ್ತಮ ಮೊತ್ತವಾಗಿದೆ. ಆದರೆ ನಮ್ಮ ಬೌಲರ್ಸ್ ಉತ್ತಮ ಸಂಯೋಜನೆ ತೋರಿ 147 ರನ್ ಗಳಿಗೆ ಎದುರಾಳಿ ತಂಡವನ್ನು ನಿಯಂತ್ರಿಸಿದ್ದರು. ಆದರೆ ಚೇಸಿಂಗ್ ವೇಳೆ ನಾವು ಒಂದು ಹಂತದಲ್ಲಿ ದಿಢೀರನೆ ವಿಕೆಟ್ ಗಳನ್ನು ಕಳೆದುಕೊಂಡಾಗ ಸ್ವಲ್ಪ ವಿಚಲಿತರಾಗಿದ್ದೆವು ಎಂದು ಡುಪ್ಲೆಸಿಸ್ ತಿಳಿಸಿದ್ದಾರೆ.
2024ರ ಐಪಿಎಲ್ ಟೂರ್ನಿಯಲ್ಲಿ 4 ಗೆಲುವು ಸಾಧಿಸಿರುವ ಆರ್ ಸಿಬಿ, ಇನ್ನೂ ಉಳಿದ 3 ಪಂದ್ಯಗಳಲ್ಲೂ ಉತ್ತಮ ರನ್ ರೇಟ್ ನೊಂದಿಗೆ ಪಂದ್ಯಗಳನ್ನು ಜಯಿಸಿದರೆ, ಆಗ ಉಳಿದ ತಂಡಗಳ ಫಲಿತಾಂಶದ ಆಧಾರದ ಮೇಲೆ ಪ್ಲೇ ಆಫ್ ಗೇರುವ ಸಾಧ್ಯತೆಗಳಿವೆ. ಮೇ 9ರಂದು ಧರ್ಮಶಾಲಾದಲ್ಲಿ ಆರ್ ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನ ಪೈಪೋಟಿ ಎದುರಿಸಲಿದೆ.