ಅಕ್ರಮಣಕಾರಿ ಶ್ವಾನಗಳ ಸಾಕಣೆ ಬಗ್ಗೆ ದೇಶದಲ್ಲಿ ಭಾರೀ ಚರ್ಚೆ ನಡೆಯುತ್ತಿರುವ ಹೊತ್ತಲ್ಲೇ ಎರಡು ರಾಟ್ ವೈಲರ್ ಶ್ವಾನಗಳ ದಾಳಿಗೆ ಒಳಗಾದ 5 ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಚೆನ್ನೈನ ಪಾರ್ಕ್ ಒಂದರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿ ಈ ಶ್ವಾನಗಳ ಮಾಲೀಕನನ್ನು ಬಂಧಿಸಿರುವ ಪೊಲೀಸರು, ದಾಳಿ ನಡೆಸಿದ ಶ್ವಾನಗಳ ಕೇರ್ ಟೇಕರ್ ಗಳ ಮೇಲೂ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಗಾಯಾಳು ಬಾಲಕಿ ಸುಧಾಂಕ್ಷ ಗೆ ನಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವಾನಗಳ ಮಾಲೀಕ ಅವುಗಳಿಗೆ ಕೀಟನಾಶಕಗಳನ್ನೂ ಸಿಂಪಡಸಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂತಹ ಅಪಾಯಕಾರಿ ನಾಯಿಗಳನ್ನು ಸಾಕುವುದು ಸರಿಯೇ ಎಂಬ ಬಗ್ಗೆ ತೀವ್ರ ಪರ ವಿರೋಧ ಚರ್ಚೆಗಳು ನಡೆಯುತ್ತಿರುವ ಹೊತ್ತಲ್ಲೇ ಈ ಘಟನೆ ನಡೆದಿದೆ.
ಪಿಟ್ ಬುಲ್ ಟೆರಿಯರ್, ಅಮೆರಿಕನ್ ಬುಲ್ ಡಾಗ್, ರಾಟ್ ವೈಲರ್, ಮಸ್ಟಿಫ್ ಸೇರಿದಂತೆ 23 ಬಗೆಯ ಅಪಾಯಕಾರಿ ನಾಯಿ ತಳಿಗಳನ್ನು ಮಾರಾಟ ಮತ್ತು ತಳಿ ಸಂವರ್ಧನೆಗೆ ಕೇಂದ್ರ ಸರ್ಕಾರ ಮಾರ್ಚ್ ನಲ್ಲಿ ನಿಷೇಧ ಹೇರಿತ್ತು. ಈ ಬಗ್ಗೆ ರಾಜ್ಯಗಳಿಗೂ ನಿರ್ದೇಶನ ನೀಡಿತ್ತು. ಒಂದು ವೇಳೆ ಈಗಾಗಲೇ ಇದ್ದಲ್ಲಿ ಅದಕ್ಕೆ ಕ್ರಿಮಿನಾಶಕ ಸಿಂಪಡಿಸಬೇಕು ಎಂದು ಆದೇಶಿಸಿತ್ತು.
ದೇಶದಲ್ಲಿ ಹೆಚ್ಚುತ್ತಿರುವ ನಾಯಿ ಕಡಿತ ಪ್ರಕರಣ ಮತ್ತು ಶ್ವಾನಗಳ ವರ್ತನೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕ ವಿಭಾಗ, ಪೆಟಾ ಮನವಿಯಂತೆ ಜೀವಕ್ಕೆ ಹಾನಿಕಾರಕವಾಗಬಲ್ಲ ಶ್ವಾನ ತಳಿಗಳನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಪಶುಸಂಗೋಪನೆ ಹಾಗೂ ಮೀನುಗಾರಿಕ ಸಚಿವಾಲಯದ ಜಂಟಿ ಕಾರ್ಯದರ್ಶಿ ಡಾ ಒಪಿ ಚೌದರಿ ಸ್ಪಷ್ಟಪಡಿಸಿದ್ದರು.
ಇಷ್ಟೇ ಅಲ್ಲದೆ ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ಸಹ ನಾಯಿ ಸೇರಿ ಸಾಕುಪ್ರಾಣಿಗಳಿಂದ ಆಗುವ ಯಾವುದೇ ಹಾನಿಗಳಿಗೆ ಅವುಗಳ ಮಾಲೀಕರೇ ಜವಾಬ್ದಾರಿ ಎಂದು ಅಭಿಪ್ರಾಯಪಟ್ಟಿತ್ತು. ಜೊತೆಗೆ ಶ್ವಾನಗಳ ಮಾಲೀಕರಿಗೆ ಕೆಲ ಮಾರ್ಗಸೂಚಿಗಳನ್ನು ಹೊರಡಿಸುವುದು ಅಗತ್ಯ ಎಂದು ತಿಳಿಸಿತ್ತು. ಬ್ರಾಂಡೆಡ್ ನಾಯಿ ಇರಬಹುದು ಅಥವಾ ಇತರ ಯಾವುದೇ ಸಾಮಾನ್ಯ ಸಾಕು ನಾಯಿಯೇ ಆಗಿದ್ರೂ ನಾಯಿಗಳ ಕೃತ್ಯಕ್ಕೆ ಅದರ ಸಂಪೂರ್ಣ ಜವಾಬ್ದಾರಿ ಮಾಲೀಕರದ್ದೇ ಆಗಿರುತ್ತದೆ ಎಂದಿದ್ದರು.
ಪಿಟ್ ಬುಲ್ ಟೆರಿಯರ್, ಅಮೆರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಡೊಗೊ ಅರ್ಜೆಂಟಿನೊ, ಅಮೆರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಬೋರ್‌ಬೋಯಲ್, ಕಂಗಾಲ್, ಟೊರ್ನ್‌ಜಾಕ್, ರಷ್ಯನ್ ಶೆಫರ್ಡ್, ಸಪ್‌ರ್‍ಲಾನಿನಾಕ್, ಜಪಾನೀಸ್ ಟೋಸಾ, ರಾಟ್‌ವೈಲರ್, ಟೆರಿಯರ್, ಮಾಸ್ಟಿಫ್ಸ್, ರಿಡ್ಜ್‌ಬ್ಯಾಕ್, ಅಕ್ಬಾಶ್, ವೂಲ್ಫ್ ಡಾಗ್ಸ್, ಕೆನರಿಯೊ, ಕೇನ್ ಕೊರ್ಸೊ ಶ್ವಾನತಳಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.