ಬೆಳ್ತಂಗಡಿ: ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವಿಠ್ಠಲ್ ಗೌಡನಿಗೆ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಬಂಧನ ವಾರಂಟ್ ಜಾರಿಗೊಳಿಸಿದೆ.
ಜೂನ್ 8 ರಂದೇ ಈ ವಾರಂಟ್ ಜಾರಿಯಾಗಿದ್ದು, ಮುಂಬರುವ ಜೂನ್ 30 ರೊಳಗೆ ವಿಠ್ಠಲ್ ಗೌಡನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ನೀಡಲಾಗಿದೆ. ನ್ಯಾಯಾಲಯದ ಅರೆಸ್ಟ್ ವಾರಂಟ್ ಕೈಸೇರುತ್ತಿದ್ದಂತೆ ವಿಠ್ಠಲ್ ಗೌಡ ನಾಪತ್ತೆಯಾಗಿದ್ದು, ಬೆಳ್ತಂಗಡಿ ಮತ್ತು ಧರ್ಮಸ್ಥಳ ಭಾಗದ ವಿವಿಧೆಡೆ ಅಧಿಕಾರಿಗಳ ತಂಡ ಬೀಡುಬಿಟ್ಟಿದ್ದು, ಶೋಧ ಕಾರ್ಯ ಚುರುಕುಗೊಳಿಸಿದೆ. ವಿಠ್ಠಲ್ ಗೌಡನ ಸ್ವಗೃಹ ಆತನ ಸಹೋದರಿ ಕುಸುಮಾವತಿ ಅವರ ನಿವಾಸ ಹಾಗೂ ಪ್ರಮುಖವಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿಯೂ ಪೊಲೀಸರು ತಪಾಸಣೆ ನಡೆಸಿದ್ದಾರೆ.
ವಿಠ್ಠಲ್ ಗೌಡ ನ್ಯಾಯಾಲಯದ ಅಧಿಕೃತ ಆದೇಶವನ್ನು ಬಹಿರಂಗವಾಗಿ ಉಲ್ಲಂಘಿಸಿ, ನಿಯಮಾವಳಿಗಳನ್ನು ಗಾಳಿಗೆ ತೂರಿ ಮತ್ತೆ ಅವಹೇಳಕಾರಿ ಹೇಳಿಕೆಯನ್ನು ನೀಡುವುದನ್ನು ಮುಂದುವರಿಸಿದ್ದ ಎನ್ನಲಾಗಿದೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಅಡಿಯಲ್ಲಿ ಆತನನ್ನು ಬಂಧಿಸಿ ಜೂನ್ 30 ರೊಳಗೆ ಕೋರ್ಟ್‌ಗೆ ಒಪ್ಪಿಸುವಂತೆ ಖಡಕ್ ಆದೇಶ ಹೊರಡಿಸಿದೆ.
ಬುರುಡೆ ಪ್ರಕರಣದಲ್ಲಿ ಚಿನ್ನಯ್ಯ ತನಗೆ ಹಣದ ಆಮಿಷ ನೀಡಿ ಈ ರೀತಿ ಹೇಳಿಕೆ ಕೊಡಿಸಲಾಗಿದೆ. ತನಗೆ ಜೀವಬೆದರಿಕೆ ಇದೆ ಎಂದು ಎಸ್ಐಟಿ ಮುಂದೆ ಹೇಳಿಕೊಂಡಿದ್ದ. ಮತ್ತೊಂದೆಡೆ ಸದ್ದು ಮಾಡಿದ್ದ ಸುಜಾತಾ ಭಟ್ ತಾನು ಹೇಳಿದ್ದು ಸುಳ್ಳು ಎಂದು ಒಪ್ಪಿಕೊಂಡಿದ್ದರು. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸದ್ಯ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ವಿಠಲ ಗೌಡ ಕೂಡ ಬಂಧನ ವಾರೆಂಟ್‌ನಿಂದ ಪರಾರಿಯಾಗಿದ್ದಾರೆ.






















