ಪುತ್ತೂರು: ಮನೆಗಳಿಗೆ ಯಾವುದೇ ದಾಖಲೆ ಇಲ್ಲದೇ ಇದ್ದರೂ 2800 ಚ.ಅ.ವಿಸ್ತೀರ್ಣದ ತನಕ ನಿರ್ಮಾಣ ಮಾಡಲಾದ ಇಲಾಖೆಯಿಂದ ಯಾವುದೇ ಎನ್‌ಒಸಿ ಪಡೆಯದೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಇಂಧನ ಸಚಿವ ಕೆ ಜೆ ಜಾರ್ಜ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಈ ಮನವಿ ಸಲ್ಲಿಸಿದರು. ಈಗಾಗಲೇ ಮನೆ ಕಟ್ಟಿಕೊಂಡು, ಮನೆ ನಿರ್ಮಾಣವಾದ ಜಾಗಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ಅಂಥವ ಕುಟುಂಬಗಳು ವಿದ್ಯುತ್ ಸಂಪರ್ಕದಿಂದ ವಂಚಿತರಾಗಿವೆ. ಈ ರೀತಿ ನಿರ್ಮಿಸಲಾದ ಮನೆಗಳಿಗೆ ಇಲಾಖೆಯಿಂದ ವಿದ್ಯುತ್ ಸಂಪರ್ಕಕ್ಕೆ ಕೆಲವೊಂದು ದಾಖಲೆಗಳನ್ನು ಕೇಳುತ್ತಿದ್ದಾರೆ. ದಾಖಲೆ ಇಲ್ಲದೇ ಇದ್ದಲ್ಲಿ ಕನಿಷ್ಠ ಎನ್‌ವೊಸಿಯನ್ನು ಕೇಳುತ್ತಿದ್ದು ಅದನ್ನು ಒದಗಿಸುವಲ್ಲಿ ಹೆಚ್ಚಿನ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ವಾಸ್ತವ್ಯಕ್ಕಾಗಿ ನಿರ್ಮಾಣ ಮಾಡಿದ ಇಂಥಹ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆಯುವಲ್ಲಿ ಇಲಾಖೆಯಿಂದ ಯಾವುದೇ ನಿಬಂಧನೆಯನ್ನು ವಿಧಿಸಬಾರದು ಈ ಬಗ್ಗೆ ಸೂಕ್ತಕ್ರಮಕೈಗೊಳ್ಳಬೇಕೆಂದು ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಶಾಸಕರನ್ನು ಮನವಿಯನ್ನು ಸ್ವೀಕರಿಸಿದ ಸಚಿವರು ಈ ಬಗ್ಗೆ ತುರ್ತು ಕ್ರಮವಹಿಸಿ ಅಂಥಹ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ಸರಕಾರ ಮುತವರ್ಜಿವಹಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ತಮ್ಮದೇ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೂ ದಾಖಲೆಯಿಲ್ಲದ ಕಾರಣ ವಿದ್ಯುತ್ ಸಂಪರ್ಕವಾಗಿಲ್ಲ ಎಂದು ಅನೇಕ ಮಂದಿ ನನ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ವಾಸದ ಮನೆಗಳು ಕರೆಂಟಿಲ್ಲದೆ ತುಂಬಾ ಇದ್ದು ಅವುಗಳಿಗೆ ವಿದ್ಯುತ್ ಸಂಪರ್ಕ ನೀಡಬೇಕಾದಲ್ಲಿ ಮೆಸ್ಕಾಂಗೆ ಎನ್‌ವೊಸಿ ನೀಡಬೇಕಾಗುತ್ತದೆ. ಎನ್‌ಒಸಿ ನೀಡುವಲ್ಲಿಯೂ ಕೆಲವೊಂದು ಕಡೆ ಸಮಸ್ಯೆ ಸೃಷ್ಟಿಯಾಗುತ್ತದೆ. ಕರೆಂಟ್ ಇಲ್ಲದ ಕಾರಣ ಅನೇಕ ಕುಟುಂಬಗಳು ತೊಂದರೆಯಲ್ಲಿದೆ ಇದನ್ನು ಪರಿಗಣಿಸಿ 2800 ಚ ಅ ವಿಸ್ತೀರ್ಣದ ಮನೆಗಳಿಗೆ ಯಾವುದೇ ಎನ್‌ಒಸಿ ಪಡೆಯದೆ ವಿದ್ಯುತ್ ಸಂಪರ್ಕ ನೀಡಬೇಕೆಂದು ಮನವಿ ನೀಡಿದ್ದೇನೆ, ಸಚಿವರು ಇದಕ್ಕೆ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಬಡವರ ಮನೆಯೂ ಬೆಳಕು ಕಾಣಲಿ ಎಂಬುದೇ ನಮ್ಮ ಉದ್ದೇಶ
ಅಶೋಕ್ ರೈ, ಶಾಸಕರು, ಪುತ್ತೂರು

























