ಪುತ್ತೂರು : ಗ್ರಾಮೀಣ ಹಾಗೂ ಅರಣ್ಯ ಅಂಚಿನ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣಗಳು ಇದೀಗ ಪುತ್ತೂರು ನಗರ ಕ್ಕೂ ಲಗ್ಗೆ ಇಟ್ಟಿವೆ . ಪುತ್ತೂರು ಬೈಪಾಸ್ ರಸ್ತೆಯ ದುಗ್ಗಮ್ಮ-ದೇರಣ್ಣ ಶೆಟ್ಟಿ ಸಭಾಭವನ ದ ಸಮೀಪ ಶುಕ್ರವಾರ (ಸೆ.11) ನಸುಕಿನ ಜಾವ ರಸ್ತೆಯಲ್ಲೇ ಎರಡು ಬೃಹತ್ ಕಾಡುಕೋಣಗಳು ಪ್ರತ್ಯಕ್ಷಗೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿವೆ.
ಶುಕ್ರವಾರ ಮುಂಜಾನೆ ವೇಳೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸುತ್ತಿದ್ದಾಗ, ಬೈಪಾಸ್ ರಸ್ತೆಯಲ್ಲೇ ಎರಡು ಕಾಡುಕೋಣಗಳು ಸಾಲಾಗಿ ನಿಂತಿರುವುದು ಗಮನಕ್ಕೆ ಬಂದಿದೆ. ಪೇಟೆ ಪ್ರದೇಶದ ಪ್ರಮುಖ ರಸ್ತೆಯಲ್ಲೇ ಕಾಡುಕೋಣಗಳು ಕಾಣಿಸಿಕೊಂಡಿದ್ದರಿಂದ ವಾಹನ ಸವಾರರು ಹಾಗೂ ಹಾಲಿನ ಡೈರಿ, ಪತ್ರಿಕೆ ವಿತರಕರು ಕೆಲಕಾಲ ಬೆಚ್ಚಿಬಿದ್ದರು. ನಗರ ದ ಜನವಸತಿ ವ್ಯಾಪ್ತಿಗೆ ಕಾಡುಕೋಣಗಳು ಆಗಮಿಸಿರುವುದು ಸ್ಥಳೀಯ ನಿವಾಸಿಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ಭೀತಿಗೆ ಕಾರಣವಾಗಿದೆ.
ಸಮೀಪದ ಅರಣ್ಯ ಪ್ರದೇಶಗಳಿಂದ ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಕಾಡುಕೋಣಗಳು ದಾರಿ ತಪ್ಪಿ ಜನವಸತಿ ಹಾಗೂ ಪೇಟೆ ಪ್ರದೇಶಗಳತ್ತ ಆಗಮಿಸುತ್ತಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಹಿಂದೆ ಗ್ರಾಮೀಣ ಭಾಗದ ತೋಟಗಳಿಗೆ ಹಾನಿ ಮಾಡುತ್ತಿದ್ದ ಇವು, ಈಗ ನೇರವಾಗಿ ನಗರ ಪ್ರದೇಶಕ್ಕೇ ಬಂದಿರುವುದರಿಂದ ಅರಣ್ಯ ಇಲಾಖಾಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು. ನಗರಕ್ಕೆ ಪ್ರವೇಶಿಸಿರುವ ಕಾಡುಕೋಣಗಳನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟಲು ಕಾರ್ಯಾಚರಣೆ ನಡೆಸಬೇಕು ಹಾಗೂ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾಡುಕೋಣ ಕಂಡರೆ ಹತ್ತಿರ ಹೋಗಬೇಡಿ, ಪ್ರಚೋದಿಸಬೇಡಿ. ಸುರಕ್ಷಿತ ಅಂತರ ಕಾಯ್ದುಕೊಳ್ಳಿ.

























