ನವದೆಹಲಿ: ಜಾಗತಿಕ ಮಟ್ಟದಲ್ಲಿ ಭಾರತ ಮತ್ತೊಮ್ಮೆ ಗಮನ ಸೆಳೆದಿದೆ. 2023ರಲ್ಲಿ ಜಗತ್ತಿನ ಮೂರನೇ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದಕ ರಾಷ್ಟ್ರ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿದೆ. ಜಪಾನ್ ಅನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನವನ್ನು ಅಲಂಕರಿಸಿರುವುದು ವಿಶೇಷ. ಭಾರತವು 2015ರಲ್ಲಿ ಸೌರ ವಿದ್ಯುತ್ ಉತ್ಪಾದನೆಯಲ್ಲಿ ಒಂಬತ್ತನೇ ಸ್ಥಾನದಲ್ಲಿತ್ತು. ಸುಮಾರು ಎಂಟು ವರ್ಷಗಳಲ್ಲಿ ಇದೀಗ 3ನೇ ಸ್ಥಾನಕ್ಕೆ ಜಿಗಿದಿದೆ.
2023ರಲ್ಲಿ ಜಾಗತಿಕ ವಿದ್ಯುತ್ ವಲಯದಲ್ಲಿ ದಾಖಲೆಯ ಶೇ. 5.5ರಷ್ಟು ಸೌರ ಶಕ್ತಿಯನ್ನು ಉತ್ಪಾದಿಸಲಾಗಿದೆ.
023ರಲ್ಲಿ ಜಾಗತಿಕ ಸೌರ ಉತ್ಪಾದನೆಯು 2015ಕ್ಕಿಂತ ಆರು ಪಟ್ಟು ಹೆಚ್ಚಳ ದಾಖಲಿಸಿದೆ. ಇದೇ ವೇಳೆ ಭಾರತದಲ್ಲಿಯೂ ಗಮನಾರ್ಹ ಬೆಳವಣಿಗೆ ಕಂಡು ಬಂದಿದೆ. ಸೌರ ವಿದ್ಯುತ್ 2015ರಲ್ಲಿದ್ದ ಶೇ. 0.5ರಿಂದ 2023ಕ್ಕೆ ಶೇ. 5.8ಕ್ಕೆ ಏರಿಕೆಯಾಗಿದೆ ಎಂದು ಎಂಬರ್ ತನ್ನ ವರದಿಯಲ್ಲಿ ಕಂಡುಕೊಂಡಿದೆ. ಇಂಟರ್ ನ್ಯಾಷನಲ್ ಎನರ್ಜಿ ಏಜೆನ್ಸಿಯ ಪ್ರಕಾರ, 2030ರ ವೇಳೆಗೆ ಸೌರ ವಿದ್ಯುತ್ ಉತ್ಪಾದನೆಯು ಜಾಗತಿಕ ವಿದ್ಯುತ್ ಉತ್ಪಾದನೆಯ ಶೇ. 22ಕ್ಕೆ ಏರಿಕೆಯಾಗಲಿದೆ. ಭಾರತದ ವಾರ್ಷಿಕ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಗೆ ಅರ್ಧದಷ್ಟು (2023ರಲ್ಲಿ 1.18 ಗಿಗಾಟನ್) ವಿದ್ಯುತ್ ಉತ್ಪಾದನೆ ಕಾರಣವಾಗುತ್ತಿರುವುದರಿಂದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವುದು ಅನಿವಾರ್ಯ ಎನಿಸಿಕೊಂಡಿದೆ.
ಸೌರ ಶಕ್ತಿ ಸತತ 19ನೇ ವರ್ಷವೂ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ಮೂಲ ಎನಿಸಿಕೊಂಡಿದೆ. 2023ರಲ್ಲಿ ವಿಶ್ವಾದ್ಯಂತ ಕಲ್ಲಿದ್ದಲಿಗಿಂತ ಎರಡು ಪಟ್ಟು ಹೆಚ್ಚು ಸೌರ ಶಕ್ತಿಯಿಂದ ವಿದ್ಯುತ್ ಉತ್ಪಾದನೆಯಾಗಿದೆ. ಇನ್ನು ಈ ಅವಧಿಯ ಸೌರ ಉತ್ಪಾದನೆಯಲ್ಲಿ ಭಾರತವು ವಿಶ್ವದ ನಾಲ್ಕನೇ ಅತಿ ದೊಡ್ಡ ಹೆಚ್ಚಳವನ್ನು ದಾಖಲಿಸಿದೆ. ಚೀನಾ (+156 ಟಿಡಬ್ಲ್ಯುಎಚ್), ಅಮೆರಿಕ (+33 ಟಿಡಬ್ಲ್ಯುಎಚ್), ಬ್ರೆಜಿಲ್ (+22 ಟಿಡಬ್ಲ್ಯುಎಚ್) ಬಳಿಕ ಭಾರತ (+18 ಟಿಡಬ್ಲ್ಯುಎಚ್) ಇದೆ.
ಎಂಬರ್‌ನ ಏಷ್ಯಾ ಕಾರ್ಯಕ್ರಮದ ನಿರ್ದೇಶಕ ಆದಿತ್ಯ ಲೊಲ್ಲಾ ಮಾತನಾಡಿ, ”ಶುದ್ಧ ವಿದ್ಯುತ್ ಹೆಚ್ಚಿಸಬೇಕಿರುವುದು ವಿದ್ಯುತ್ ವಲಯದಲ್ಲಿ ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡಲು ಮಾತ್ರವಲ್ಲದೇ ಏರುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಮತ್ತು ಆರ್ಥಿಕ ಹೊರೆಯನ್ನು ದೂರ ಸರಿಸಲು ಅವಶ್ಯಕವಾಗಿದೆ. ಅಲ್ಲದೇ ಇದು ಹವಾಮಾನ ಬದಲಾವಣೆಯನ್ನು ನಿಭಾಯಿಸುವಲ್ಲೂ ನಿರ್ಣಾಯಕ” ಎಂದು ಹೇಳಿದ್ದಾರೆ.
ದೇಶದಲ್ಲಿ ಈಗಾಗಲೇ ವಿವಿಧ ಯೋಜನೆಗಳ ಮೂಲಕ ಸೌರ ವಿದ್ಯುತ್ ಉತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ.