ಪುತ್ತೂರು, ಅಕ್ಟೋಬರ್ 14: ತುಳುನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ವಿಶಿಷ್ಟ ಜಾನಪದ ಕಲೆಯಾದ ಹುಲಿವೇಷ ಕುಣಿತವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ, ವುತ್ತೂರುದ ಪಿಲಿಗೊಬ್ಬು 2026 ರ ಸೀಸನ್ 4 ಹಾಗೂ ಪುತ್ತೂರು ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಅಕ್ಟೋಬರ್ 17 ರಂದು ಶನಿವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಸಹಜ್ ರೈ ಬಳಜ್ಜ ಗೌರವಾಧ್ಯಕ್ಷರು ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ಅಕ್ಟೋಬರ್ 17 ರಂದು ಬೆಳಗ್ಗೆ 10:30 ಕ್ಕೆ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಸರಸ್ವತಿ ಶ್ರೀಪಾದಂಗಳವರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಪಿಲಿಗೊಬ್ಬು ವೇದಿಕೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಪ್ರೀತಂ ಜೆ ಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಶಾಸಕರು- ಹಾಗೂ ಪುತ್ತೂರಿನ ಪ್ರತಿಷ್ಠಿತ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ
ಈ ಬಾರಿಯ ಪಿಲಿಗೊಬ್ಬು ಸ್ಪರ್ಧೆಯಲ್ಲಿ ಜಿಲ್ಲೆಯ ಪ್ರಸಿದ್ಧ 9 ಆಯ್ದ ಹುಲಿವೇಷ ತಂಡಗಳು ಭಾಗವಹಿಸಲಿವೆ. ಅತ್ಯುತ್ತಮ ಪ್ರದರ್ಶನ ನೀಡುವ ತಂಡಕ್ಕೆ ಪ್ರಥಮ ಬಹುಮಾನವಾಗಿ 4 ಲಕ್ಷ ರೂ., ದ್ವಿತೀಯ ಬಹುಮಾನವಾಗಿ 3 ಲಕ್ಷ ರೂ. ಹಾಗೂ ತೃತೀಯ ಬಹುಮಾನವಾಗಿ 2 ಲಕ್ಷ ರೂ. ನೀಡಲಾಗುವುದು. ಇದರೊಂದಿಗೆ ಪ್ರೋತ್ಸಾಹಕ ಬಹುಮಾನಗಳನ್ನೂ ವಿತರಿಸಲಾಗುವುದು, ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೂ Rs.60,000/-ಗೌರವ ಸಂಭಾವನೆ ನೀಡಿ ಗೌರವಿಸಲಾಗುವುದು .
ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಪ್ರಶಸ್ತಿ ಹಾಗೂ ಗುಂಪು ಪ್ರಶಸ್ತಿ ವಿಭಾಗಗಳಲ್ಲಿ ಉತ್ತಮ ತಾಸೆ, ಉತ್ತಮ ಬಣ್ಣ ಮತ್ತು ಉತ್ತಮ ಧರಣಿ ಮಂಡಲ ಕುಣಿತಕ್ಕೆ ಪ್ರಶಸ್ತಿಗಳನ್ನು ನೀಡಲಾಗುವುದು. ವೈಯಕ್ತಿಕ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ, ಪುತ್ತೂರುದ ಹುಲಿ, ಮುಡಿ ಹಾರಿಸುವುದು ಮತ್ತು ನಾಣ್ಯ ತೆಗೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳಿಗೆ ವಿಶೇಷ ಬಹುಮಾನಗಳಿರಲಿವೆ .
ಪ್ರತಿ ತಂಡದಲ್ಲಿ
15 ಹುಲಿವೇಷಧಾರಿಗಳು ಭಾಗವಹಿಸಲಿದ್ದು, ಕಲಾ ಪ್ರದರ್ಶನಕ್ಕೆ 20+2 ನಿಮಿಷಗಳ
ಕಾಲಾವಕಾಶ ನೀಡಲಾಗುವುದು. ಹುಲಿವೇಷ ಕುಣಿತ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣತಿ ಹೊಂದಿರುವ ಜಿಲ್ಲೆಯ ಖ್ಯಾತ ತೀರ್ಪುಗಾರರು ಸ್ಪರ್ಧೆಯ ನಿರ್ಣಾಯಕರಾಗಿ ಭಾಗವಹಿಸಲಿದ್ದಾರೆ.
ಕೋನ್ಸಲ್ವುಡ್ ಮತ್ತು ಸ್ಯಾಂಡಲ್ವುಡ್ ತಾರೆಯರ ಮೆರುಗು
ಪುತ್ತೂರುದ ಪಿಲಿಗೊಬ್ಬು ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲು ತುಳುನಾಡಿನ ಹೆಸರಾಂತ ಕೋಸ್ಟಲ್ವುಡ್ ಹಾಗೂ ರಾಜ್ಯದ ಪ್ರಸಿದ್ಧ ಸ್ಯಾಂಡಲ್ವುಡ್ ನಟ-ನಟಿಯರು ಭಾಗವಹಿಸಲಿದ್ದಾರೆ. ಇದರಿಂದ ಕಾರ್ಯಕ್ರಮಕ್ಕೆ ಮತ್ತಷ್ಟು ಆಕರ್ಷಣೆ ದೊರೆಯಲಿದೆ ವಿಜೃಂಭಣೆಯಿಂದ ಜರುಗಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಅಕ್ಟೋಬರ್ 17 ಮತ್ತು 18 ರಂದು ಪುತ್ತೂರು ಪುಡ್ ಫೆಸ್ಟ್
ಪಿಲಿಗೊಬ್ಬು ಕಾರ್ಯಕ್ರಮದೊಂದಿಗೆ ಪುತ್ತೂರು ಫುಡ್ ಫೆಸ್ಟ್ ಕೂಡ ನಡೆಯಲಿದೆ. ಅಕ್ಟೋಬರ್ 17 ರಂದು ಶನಿವಾರ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ ಹಾಗೂ ಅಕ್ಟೋಬರ್ 18 ರಂದು ಭಾನುವಾರ ಬೆಳಗ್ಗೆ 10 ರಿಂದ ರಾತ್ರಿ 10 ರವರೆಗೆ ಆಹಾರಮೇಳ ಆಯೋಜಿಸಲಾಗಿದೆ.
ಸುಂದರ ಹಾಗೂ ಸುಸಜ್ಜಿತ ಪಗೋಡ ಮಾದರಿಯ ಮಳಿಗೆಗಳಲ್ಲಿ ಬರ್ಗರ್, ಸ್ಯಾಂಡ್ವಿಚ್, ವಿವಿಧ ಬಗೆಯ ದೋಸೆಗಳು, ಶ್ರೀಫಲ ಐಸ್ಟ್ರೀಂ, ಗೀ ಪುಡ್ಡಿಂಗ್ ಗೀ ಮಿನಿ ಇಡ್ಲಿ – ವಿವಿಧ ಬಗೆಯ ಐಸ್ಕ್ರೀಮ್ಗಳು, ಮೋಕ್ಟೇಲ್ ಜ್ಯೂಸ್, ಮಟ್ಕಾ ಸೋಡಾ ಹಾಗೂ ಕರಾವಳಿಯ ಸಾಂಪ್ರದಾಯಿಕ ರುಚಿಕರ ಖಾದ್ಯಗಳು ಸೇರಿದಂತೆ ಸುಮಾರು 50 ವಿವಿಧ ಆಹಾರ ಮಳಿಗೆಗಳು ಆಹಾರಪ್ರಿಯರನ್ನು ಆಕರ್ಷಿಸಲಿವೆ.
ತುಳುನಾಡಿನ ನಾಡಿಮಿಡಿತವಾಗಿರುವ ಹುಲಿವೇಷ ಕುಣಿತದಂತಹ ದೈವಿಕ ಹಿನ್ನೆಲೆಯ ಜಾನಪದ ಕಲೆಯನ್ನು ಪ್ರೋತ್ಸಾಹಿಸುವುದು ಹಾಗೂ ಈ ಕಲೆಯ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪಿಲಿಗೊಬ್ಬು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯೊಂದಿಗೆ ಆಹಾರ ವೈವಿಧ್ಯವನ್ನೂ ಒಂದೇ ವೇದಿಕೆಯಲ್ಲಿ ಪರಿಚಯಿಸುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಮಾಧ್ಯಮಗಳು ಕಾರ್ಯಕ್ರಮಕ್ಕೆ ವ್ಯಾಪಕ ಪ್ರಚಾರ ನೀಡುವ ಮೂಲಕ ಸಹಕರಿಸಬೇಕೆಂದು ಆಯೋಜಕರು ಗೌರವಪೂರ್ವಕವಾಗಿ ವಿನಂತಿಸಿದ್ದಾರೆ .ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷರು, ಶ್ರೀ ರತನ್ ರೈ ಕುಂಬ್ರ ಕಾರ್ಯಾಧ್ಯಕ್ಷರು, ಶ್ರೀ ಶರತ್ ಆಳ್ವ ಕೋರೆಲು ಪ್ರಧಾನ ಕಾರ್ಯದರ್ಶಿಗಳು, ಅಶೋಕ್ ಅಡೂರ್ ಕೋಶಾಧಿಕಾರಿ, ಪುತ್ತೂರುದ ಪಿಲಿಗೊಬ್ಬು – 2026, ಸೀಸನ್ 4 ರ ಆಯೋಜಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು.

























