ಬೆಂಗಳೂರು: ರಾಜ್ಯದಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗಿರುವುದು ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ವಿಚಾರವಾಗಿ ಬಿಜೆಪಿ ನಿಯೋಗ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಹುಬ್ಬಳ್ಳಿ ನಗರ ಒಂದು ತಿಂಗಳ ಅವಧಿಯಲ್ಲಿ 2 ಭೀಕರ ಕೊಲೆಗಳಿಗೆ ಸಾಕ್ಷಿಯಾಗಿತ್ತು. ಆಡಳಿತಾರೂಢ ಕಾಂಗ್ರೆಸ್ ನಾಯಕರಿಂದಲೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯ ವಿಚಾರವಾಗಿ ಅಸಮಾಧಾನ ವ್ಯಕ್ತವಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ದೂರು ನೀಡಿದೆ.
ಮಾಜಿ ಸಿಎಂ ಡಿವಿ ಸದಾನಂದ ಗೌಡ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ. ಶಾಸಕ ಸಿಕೆ ರಾಮಮೂರ್ತಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್, ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ನಿಯೋಗದಲ್ಲಿದ್ದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಡಿಜಿಪಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗಿದೆ.
ಕರ್ನಾಟಕ ರಾಜ್ಯದ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿರುವುದು ತಮಗೂ ತಿಳಿದಿದೆ. ಹಿಂದೆ ರಾಜ್ಯವು ಕಾನೂನು- ಸುವ್ಯವಸ್ಥೆ ವಿಚಾರದಲ್ಲಿ ಉತ್ತಮ ಹೆಸರು ಪಡೆದಿತ್ತು. ಅಪರಾಧಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಡುವ ನಿಟ್ಟಿನಲ್ಲಿ ಪ್ರಸಿದ್ಧಿ ಪಡೆದಿತ್ತು. ಆದರೆ, ಇದೀಗ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಗಳು ಹಾಗೂ ಬಡವರು, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. ಕರ್ನಾಟಕವು ಈ ಮೂಲಕ “ಅಪರಾಧಗಳ ರಾಜ್ಯ” ಎಂಬ ಕೆಟ್ಟ ಹೆಸರು ಪಡೆಯುವಂತಾಗಿದೆ ಎಂದು ಮನವಿ ಪತ್ರದಲ್ಲಿ ಬಿಜೆಪಿ ಉಲ್ಲೇಖಿಸಿದೆ.
ಆರ್ಥಿಕ ಅಪರಾಧಗಳಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ. ಮಕ್ಕಳ ಮೇಲಿನ ಅಪರಾಧಗಳ ಪ್ರಮಾಣ ಶೇ 46ರಷ್ಟು ಹೆಚ್ಚಳ, ಹಿರಿಯ ನಾಗರೀಕರ ಮೇಲಿನ ಅಪರಾಧದಲ್ಲಿ ಶೇಕಡಾ 86ರಷ್ಟು ಹೆಚ್ಚಳ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಬಂದಿರುವುದು ಅತ್ಯಂತ ಬೇಸರದ ಮತ್ತು ಆತಂಕದ ವಿಚಾರ. ಕರ್ನಾಟಕ ರಾಜ್ಯದ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ಸರಕಾರವು ಕಾನೂನು- ಸುವ್ಯವಸ್ಥೆ ಕಡೆ ಗಮನ ಕೊಡುತ್ತಿಲ್ಲ. ಅಪರಾಧ ಪ್ರಮಾಣ ಹೆಚ್ಚಳದ ವಿಚಾರದಲ್ಲೂ ಅದು ಯಾವುದೇ ಕ್ರಮ ಕೈಗೊಂಡಿಲ್ಲ. ಎಂಬುದನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇವೆ ಎಂದು ಬಿಜೆಪಿ ನಿಯೋಗ ಉಲ್ಲೇಖಿಸಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರವು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ವಿವಿಧೆಡೆ ಸೋಲಿನ ಭೀತಿಯಿಂದ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳಲು ಮುಂದಾಗಿತ್ತು. ಬಿಜೆಪಿ – ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗ ಪ್ರಕರಣ ದಾಖಲಿಸದೆ ಇರುವುದು, ಜೀವ ಬೆದರಿಕೆ ಹಾಕಿದರೂ ಕ್ರಮ ಕೈಗೊಳ್ಳದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್ ಆಡಳಿತ ವೈಫಲ್ಯದಿಂದ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ, ಕುಸಿದು ಆರಾಜಕತೆ ಸೃಷ್ಟಿ ಮಾಡಿದ್ದಾರೆ. ಇದರಿಂದ ರಾಜ್ಯದಲ್ಲಿ ಪೊಲೀಸ್ ಇಲಾಖೆ ಇದೆಯೋ ಇಲ್ಲವೋ ಎಂಬ ಸಂದೇಹ ಬರುತ್ತಿದ್ದು ಜನಸಾಮಾನ್ಯರು ಇದೇ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ ಎಂದು ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಗನ್ ಹಿಡಿದು ಓಡಾಡುವ ವ್ಯಕ್ತಿ ಮುಖ್ಯಮಂತ್ರಿಗಳಿಗೆ ಹೂಹಾರ ಹಾಕುವ ದುಸ್ಥಿತಿ ರಾಜ್ಯದ್ದು, ಜನರು ಆತಂಕದಿಂದ ಜೀವನ ನಡೆಸುತ್ತಿದ್ದಾರೆ. ಒಂದು ವರ್ಗಕ್ಕೆ ಬೆಣ್ಣೆ ಇನ್ನೊಂದು ವರ್ಗಕ್ಕೆ ಜೈಲುವಾಸ, ಲಾಠಿ ಏಟು ಎಂಬ ದುಸ್ಥಿತಿ ರಾಜ್ಯದ್ದಾಗಿದೆ. ಕೋಮುದ್ವೇಷದ ಹಿಂಸಾಚಾರದ ಘಟನೆಗಳು, ರಾಜಕೀಯಪ್ರೇರಿತ ದ್ವೇಷಗಳಿಂದ ನಾಗರೀಕರಿಗೆ ಸುರಕ್ಷತೆ ಮತ್ತು ಭದ್ರತೆ ಇಲ್ಲದೆ ಒದ್ದಾಡುವಂತಾಗಿದೆ. ಹಿಂದೂ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರ ಮೇಲೆ ಹಗೆತನ ಸಾಧಿಸುವುದು ಕಾಂಗ್ರೆಸ್ಗೆ ಸರ್ವೇಸಾಮಾನ್ಯವಾಗಿ ಬಿಟ್ಟಿದೆ ಎಂಬುದನ್ನೂ ತಮ್ಮ ಅವಗಾಹನೆಗೆ ತರಲು ಬಯಸುತ್ತೇವೆ.
ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬುದು ಕಾಂಗ್ರೆಸ್ ಆಡಳಿತದಲ್ಲಿ ಪದೇಪದೇ ಸಾಬೀತಾಗಿದೆ. ಬೆಳಗಾವಿಯಲ್ಲಿ ನಡೆದ ಘಟನೆಯಂತೂ ಅತ್ಯಂತ ಅಮಾನವೀಯ. ಸಿಎಂ ಸಿದ್ದರಾಮಯ್ಯನವರು ಸೇರಿದಂತೆ ಸಂಪೂರ್ಣ ಆಡಳಿತ ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆಸುತ್ತಿದ್ದಾಗ 42 ವರ್ಷದ ಮಹಿಳೆಯನ್ನು ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿ ಹಲ್ಲೆ ನಡೆಸಿದ್ದರು. ಪೊಲೀಸ್ ಇಲಾಖೆ ಇಂಥ ದುರ್ಘಟನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದರೂ ತಪ್ಪಾಗಲಾರದು ಎಂದು ಬಿಜೆಪಿ ನಿಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ಕಾಂಗ್ರೆಸ್ ಸರಕಾರವು ಮುಸ್ಲಿಂ ಸಮುದಾಯದ ಅಪರಾಧಿಗಳು ಭಾಗಿಯಾದ ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತದೆ. ಮುಸ್ಲಿಂ ವ್ಯಕ್ತಿಗಳಗುಂಪಿನಿಂದ ದಂಪತಿಗಳು ನೈತಿಕ ಪೊಲೀಸ್‌ಗಿರಿಗೆ ಬಲಿಯಾಗಿ ಈ ದಂಪತಿಗಳು ನ್ಯಾಯಕ್ಕಾಗಿ ಕಾಂಗ್ರೆಸ್ ಸರಕಾರವನ್ನು ಆಗ್ರಹಿಸಿದ್ದರು ಆರಂಭದಲ್ಲಿ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮುಚ್ಚಿಹಾಕಲು ಈ ಸರಕಾರ ಮುಂದಾಗಿತ್ತು. ಬೆಂಗಳೂರಿನ ನಗರ್ತಪೇಟೆಯಲ್ಲಿ ಹನುಮಾನ್ ಚಾಲೀಸ ಜೋರಾಗಿ ಹಾಕಿದ್ದಾಗಿ ಆಕ್ಷೇಪಿಸಿ ಹಿಂದೂ ಅಂಗಡಿಯವರೊಬ್ಬನ ಮೇಲೆ ಮುಸ್ಲಿಂ ದುಷ್ಕರ್ಮಿಗಳು ಹಲ್ಲೆ ನಡೆಸಿದರು. ಇದನ್ನು ಸಮರ್ಥನೆ ಮಾಡಿಕೊಳ್ಳೋದಕ್ಕೆ ಕಾಂಗ್ರೆಸ್ ಸರಕಾರ ಮುಂದಾಗಿತ್ತು. ಕಾಂಗ್ರೆಸ್ ಸರಕಾರವು ಹಿಂದೂಗಳನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತಿದೆ ಎಂಬುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಬಿಜೆಪಿ ಹೇಳಿದೆ.