ಟೆಹ್ರಾನ್: ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಹೆಲಿಕಾಪ್ಟರ್ ಅಪಘಾತದಲ್ಲಿ ಸಂಪೂರ್ಣವಾಗಿ ಸುಟ್ಟು ಹೋಗಿದೆ. ದುರದೃಷ್ಟವಶಾತ್ ಅದರಲ್ಲಿದ್ದ ಎಲ್ಲ ಪ್ರಯಾಣಿಕರು ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದೆ” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕರ್ತವ್ಯ ನಿರ್ವಹಿಸುವಾಗ ಅಪಘಾತಕ್ಕೀಡಾಗಿ ಹುತಾತ್ಮರಾದರು” ಎಂದು ಇರಾನ್ ಮೆಹರ್ ಏಜೆನ್ಸಿ ವರದಿ ಮಾಡಿದೆ.
ಇದೀಗ ಈ ದುರ್ಘಟನೆಗೂ ಮುನ್ನ ಚಿತ್ರೀಕರಣಗೊಂಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ರೈಸಿ ತನ್ನ ಅಧಿಕಾರಿಗಳ ಜೊತೆ ಕುಳಿತು ಮಾತುಕತೆ ನಡೆಸುತ್ತಿರುವುದನ್ನು ಕಾನಬಹುದಾಗಿದೆ. ಇದಾದ ಕೇವಲ 30ನಿಮಿಷಗಳ ನಂತರ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಸುಮಾರು 16ಗಂಟೆಗಳ ಶೋಧ ಕಾರ್ಯಾಚರಣೆ ಬಳಿಕ ವಿಮಾನದ ಅವಶೇಷಗಳು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ರೈಸಿ ಮತ್ತು ಅವರ ಜೊತೆಗಿದ್ದವರು ಮೃತಪಟ್ಟಿರುವ ಬಗ್ಗೆ ಇರಾನ್ ದೃಢಪಡಿಸಿದೆ.
ರವಿವಾ ಪರ್ವತಗಳಲ್ಲಿ ಪತನಗೊಂಡ ಹೆಲಿಕಾಪ್ಟರ್ ನ ಅವಶೇಷಗಳನ್ನು ರಕ್ಷಣಾ ತಂಡ ಪತ್ತೆ ಮಾಡಿದೆ.
ಅಧ್ಯಕ್ಷರ ಹೆಲಿಕಾಪ್ಟರ್‌ಗೆ ಬೆಂಗಾವಲಾಗಿ ತೆರಳಿದ್ದ ಇನ್ನೆರಡು ಹೆಲಿಕಾಪ್ಟರ್‌ಗಳು ವಾಪಸಾಗಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಘಟನೆ ಸಂಭವಿಸಿದ ಸ್ಥಳ ಇರಾನ್‌ನ ದೊಡ್ಡ ಪಟ್ಟಣಗಳಲ್ಲಿ ಒಂದಾಗಿರುವ ತಬ್ರಿಜ್‌ನಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಪ್ರತಿಕೂಲ ಹವಾಮಾನ, ರಾತ್ರಿಯಾದ ಕಾರಣ ಶೋಧ ಕಾರ್ಯಕ್ಕೆ ಅಡ್ಡಿಯಾಗಿತ್ತು.
ಇರಾನ್ ನ ರಾಜಧಾನಿ ಟೆಹ್ರಾನ್ ನಿಂದ ಸುಮಾರು 600 ಕಿಲೋಮೀಟರ್ ದೂರದಲ್ಲಿರುವ ವಾಯುವ್ಯ ಇರಾನ್ ನಲ್ಲಿರುವ ಅಜೆರ್‌ಬೈಜಾನ್‌ನ ಗಡಿಗೆ ಭೇಟಿ ನೀಡಿ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ರೈಸಿ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಅಧ್ಯಕ್ಷ ಡಾ ಸಯ್ಯದ್ ಇಬ್ರಾಹಿಂ ರೈಸಿ ಅವರ ದುರಂತಮಯ ನಿಧನದಿಂದ ತೀವ್ರ ದುಃಖ ಹಾಗೂ ಆಘಾತ ಉಂಟಾಗಿದೆ. ಭಾರತ- ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಕೊಡುಗೆಯನ್ನು ಸದಾ ನೆನಪಿಸಿಕೊಳ್ಳಲಾಗುತ್ತದೆ. ಅವರ ಕುಟುಂಬ ಹಾಗೂ ಇರಾನ್‌ನ ಜನತೆಗೆ ನನ್ನ ಹೃದಯಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇನೆ. ಈ ದುಃಖದ ಸಂದರ್ಭದಲ್ಲಿ ಭಾರತವು ಇರಾನ್ ಜತೆಗೆ ಇದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.