ಕರ್ನಾಟಕ ರಾಜ್ಯ ಸರ್ಕಾರಕ್ಕೆ ಒಂದು ವರ್ಷ ತುಂಬಿದ್ದು, ಸಾಧನೆಗಳ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಇತ್ತ ವಿಪಕ್ಷ ನಾಯಕರು ವರ್ಷದ ಕಾಂಗ್ರೆಸ್ ಸಾಧನೆ ಶೂನ್ಯ ಎಂದು ದೂರಿದ್ದಾರೆ. ಬೊಕ್ಕಸ ಬರಿದು ಮಾಡಿಕೊಂಡು ರಾಜ್ಯ ಜನರ ಶಾಪಕ್ಕೆ ಗುರಿಯಾಗಿದೆ. ಕಾಂಗ್ರೆಸ್ ಒಂದು ವರ್ಷದ ಸಾಧಣೆ ಶೂನ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ವಾಗ್ದಾಳಿ ನಡೆಸಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದೆ, ಗ್ಯಾರಂಟಿ ನೆಪದಲ್ಲಿ ಬೊಕ್ಕಸ ಬರಿದು ಮಾಡಿ ನಿಂತ ನೀರಾಗಿರುವ ಕಾಂಗ್ರೆಸ್ ಸರ್ಕಾರ ನಾಡಿನ ರೈತರು, ಶ್ರಮಿಕರು, ಮಹಿಳೆಯರು, ಯುವಕರು, ಉದ್ಯಮಿಗಳು, ಹಿಂದುಳಿದ ಸಮುದಾಯಗಳು ಸೇರಿದಂತೆ ವಿವಿಧ ವರ್ಗಗಳ ಹಿತಾಸಕ್ತಿಗಳನ್ನು ಕಡೆಗಣಿಸಿ ಜನಸಾಮಾನ್ಯರ ಶಾಪಕ್ಕೆ ಗುರಿಯಾಗಿದೆ ಎಂದು ಬಿವೈ ವಿಜಯೇಂದ್ರ ದೂರಿದರು. ಒಂದು ವರ್ಷ ಪೂರೈಸಿದ ಕರ್ನಾಟಕ ಕಾಂಗ್ರೆಸ್ ಸಾಧನೆ ಏನು ಇಲ್ಲ. ರಾಜ್ಯಾದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ವೈಫಲ್ಯಗೊಂಡಿದೆ ಎಂದರು.
ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ಮಹಿಳೆಯರು ಹೆಣ್ಣು ಮಕ್ಕಳಿಗಿಲ್ಲ ಸುರಕ್ಷತೆ ಇಲ್ಲದಾಗಿದೆ. ಸಾಲದ ಹೊರೆ ಏರುತ್ತಲೇ ಇದ್ದು, ನಾಡಿನ ಅಭಿವೃದ್ದಿ ಮಾತ್ರ ಕಣ್ಮರೆಯಾಗಿದೆ. ಅಧಿಕಾರದಲ್ಲಿರುವ ಸಚಿವರುಗಳು ನಾಲಾಯಕರುಗಳು ಎಂದು ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಾಲು ಸಾಲು ಎಡವಟ್ಟುಗಳಾಗಿವೆ. ಮುಖ್ಯಮಂತ್ರಿ ಗಾದಿಗೇರಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕನಸು ಕಟ್ಟಿದ್ದಾರೆ. ಇತ್ತ ಸಿಎಂ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಸರ್ಕಸ್ಸು ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಜಾತಿಗೊಂದು ಬಣವಿದೆ. ಜಿಲ್ಲೆಗೊಂದು ಬಣ ವಿದೆ. ನಾಡಿನ ಅಭಿವೃದ್ದಿ ಮಾತ್ರ ಗೌಣವಾಗಿದೆ. ಏನು ಅಭಿವೃದ್ಧಿ ಆಗಿಲ್ಲ ಎಂದು ಆರೋಪಿಸಿದ ಆರ್. ಅಶೋಕ್ ಅವರು, ಇದು ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಕಥೆ ಏಳೂವರೇ ಕೋಟಿ ಕನ್ನಡಿಗರ ದಿನನಿತ್ಯದ ವ್ಯಥೆ ಎಂದು ಅವರು ಲೇವಡಿ ಮಾಡಿದ್ದಾರೆ. ಅಧಿಕಾರಕ್ಕೆ ಬಂದ ಒಂದು ವರ್ಷ ಇದು ನಿರರ್ಥಕ ವರ್ಷವಾಗಿದೆ. ಅತಿ ಕೆಟ್ಟ ಆಡಳಿತ ನಾವು ನೋಡಿದ್ದೇವೆ ಎಂದು ಅವರು ಆರೋಪಿಸಿದರು.