ಕೊಟ್ಟಿಗೆಗೆ ಬೆಂಕಿ| ದನಕರು ಸಜೀವ ದಹನ, ಎರಡು ಜಾನುವಾರುಗಳಿಗೆ ಗಾಯ ಆಕಸ್ಮಿಕ ಬೆಂಕಿ – ದನಕರು ಸಾವು – ಅಪಾರ ನಷ್ಟ
ಬ್ರಹ್ಮಾವರ : ಆಕಸ್ಮಿಕವಾಗಿ ಕೊಟ್ಟಿಗೆಗೆ ಬೆಂಕಿ ಬಿದ್ದ ಪರಿಣಾಮ ದನ ಹಾಗೂ ಕರು ಸಾವನ್ನಪ್ಪಿ ಎರಡು ಜಾನುವಾರುಗಳು ಗಾಯಗೊಂಡಿರುವ ಘಟನೆ 14ನೇ ಕಾಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡೂರು ಗ್ರಾಮದ ಕುಡುಬೇರಬೆಟ್ಟು ಎಂಬಲ್ಲಿ ಇಂದು ನಸುಕಿನ ವೇಳೆ 2:30ರ ಸುಮಾರಿಗೆ ನಡೆದಿದೆ.
ಕುಡುಬೇರಬೆಟ್ಟುವಿನ ರುದ್ರು ಮಂಜುನಾಥ ಮರಕಾಲ ಎಂಬವರ ದನದ ಕೊಟ್ಟಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಅನಾಹುತ ಸಂಭವಿಸಿದೆ. ಇದರ ಪರಿಣಾಮ ಕೊಟ್ಟಿಗೆಯಲ್ಲಿ ಮಲಗಿದ್ದ ಒಂದು ದನ ಹಾಗೂ ಒಂದು ಕರು ಸಾವನ್ನಪ್ಪಿದೆ. ಬೆಂಕಿಯಿಂದ ಕೊಟ್ಟಿಗೆಯಲ್ಲಿದ್ದ ಎರಡು ದನಗಳು ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ತಿಳಿದು ಬಂದಿದೆ. ಕೊಟ್ಟಿಗೆಯಲ್ಲಿದ್ದ ಒಣ ಹುಲ್ಲು ಸಂಪೂರ್ಣ ಸುಟ್ಟು ಹೋಗಿದೆ. ಒಟ್ಟು 50,000 ರೂ. ನಷ್ಟ ಅಂದಾಜಿಸಲಾಗಿದೆ.
ಸ್ಥಳಕ್ಕೆ ಕಾಡೂರು ಗ್ರಾಮ ಪಂಚಾಯತ್ ಅಧ್ಯಕ್ಷ ಜಲಾಂಧರ್ ಶೆಟ್ಟಿ, ವಾರ್ಡ್ ಸದಸ್ಯರಾದ ಪಾಂಡುರಂಗ ಶೆಟ್ಟಿ, ಅಮಿತಾ ರಾಜೇಶ್, ಗ್ರಾಮಕರಣಿಕ ಹರೀಶ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
























