ಶ್ರೀನಗರ: ಮಹತ್ವದ ಬೆಳವಣಿಗೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪಾಕಿಸ್ತಾನದಲ್ಲಿ ‘ಅಪರಿಚಿತ ವ್ಯಕ್ತಿಗಳು’ ಹತ್ಯೆ ಮಾಡಿದ್ದಾರೆ ಎಂದು ಪಾಕಿಸ್ತಾನದ ಮಾಧ್ಯಮಗಳು ಮತ್ತು ಯೂಟ್ಯೂಬರ್‌ಗಳು ಹೇಳಿದ್ದಾರೆ. ಜೂನ್ 9ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭೀಕರ ಭಯೋತ್ಪಾದಕರ ದಾಳಿಗೆ ಪುಟ್ಟ ಕಂದಮ್ಮನೂ ಸೇರಿ ಒಟ್ಟು 9 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಇದೀಗ ಈ ಕೃತ್ಯಕ್ಕೆ ಸಂಚು ರೂಪಿಸಿದವನ ವಿರುದ್ಧ ಪ್ರತಿಕಾರ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಬ್ಬರು ವ್ಯಕ್ತಿಗಳು ಈ ಬಗ್ಗೆ ಮಾಹಿತಿ ನೀಡುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ. ಈ 16 ಸೆಕೆಂಡುಗಳ ಈ ಪುಟ್ಟ ವಿಡಿಯೊ ಇದೀಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಇಬ್ಬರು ಕ್ಯಾಮೆರಾ ಮುಂದೆ ನಿಂತು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗಳ ಬಗ್ಗೆ ಚರ್ಚಿಸುತ್ತಾರೆ. ಬಳಿಕ ಪಾಕಿಸ್ತಾನದಲ್ಲಿ ಅಪರಿಚಿತ ವ್ಯಕ್ತಿಗಳು ಈ ಕೃತ್ಯದ ಮಾಸ್ಟರ್ ಮೈಂಡ್ ಅನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಸದ್ಯ ಈ ಬಗ್ಗೆ ಚರ್ಚೆ ನಡೆಯುತ್ತಿದೆ.
ವಿಶೇಷ ಎಂದರೆ ಪಾಕಿಸ್ತಾನದಲ್ಲಿ ಉಗ್ರರ ಹತ್ಯೆ ಹೆಚ್ಚುತ್ತಿದೆ. ಅಪರಿಚಿತರ ಗುಂಡಿನ ದಾಳಿಗೆ ಉಗ್ರರು ಬಲಿಯಾಗುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಬೇಹುಗಾರಿಕೆ ಆರೋಪ ಹೊತ್ತು ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಹತ್ಯೆ ಮಾಡಿದ್ದ ಅಮೀರ್ ಸರ್ಫರಾಜ್ ಅಲಿಯಾಸ್ ತಾಂಬಾ ಎಂಬಾತನನ್ನು ಏಪ್ರಿಲ್ 14ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು.