ಪಂಜಾಬ್ : ವಿಶ್ವ ಹಿಂದೂ ಪರಿಷದ್ ಮುಖಂಡನ ಹಂತಕರ ಪತ್ತೆಗಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ತಲಾ ಹತ್ತು ಲಕ್ಷ ರೂ. ಬಹುಮಾನ ಘೋಷಿಸಿದೆ. ಅಷ್ಟೇ ಅಲ್ಲದೇ ಎನ್‌ಐಎ ಈ ಇಬ್ಬರು ಹಂತಕರ ಫೊಟೋವನ್ನೂ ಸಹ ಬಿಡುಗಡೆ ಮಾಡಿದೆ. ಕಳೆದ ತಿಂಗಳು ವಿಶ್ವ ಹಿಂದೂ ಪರಿಷದ್ ನಾಯಕ ವಿಕಾಸ್ ಪ್ರಭಾಕರ್‌ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದೀಗ ಹಂತಕರ ಪತ್ತೆಗಾಗಿ ಎನ್‌ಐಎ ಪ್ರಕಟಣೆ ಹೊರಡಿಸಿದೆ.
ಎನ್‌ಐಎ ಪ್ರಕಟಣೆ ಪ್ರಕಾರ ಹಂತಕರಾದ ಗರ್‌ಪಧನಾ ಗ್ರಾಮದ ನಿವಾಸಿಯಾಗಿರುವ ಕುಲದೀಪ್ ಸಿಂಗ್ ಪುತ್ರ ಹರ್ಜಿತ್ ಸಿಂಗ್ ಅಲಿಯಾಸ್ ಲಡ್ಡಿ ಮತ್ತು ಯಮುನಾ ನಗರ ನಿವಾಸಿ ಕುಲ್ಬೀರ್ ಸಿಂಗ್ ಪುತ್ರ ಸುಖ್ವಿಂದರ್ ಸಿಂಗ್ ವಿರುದ್ಧ ಹರಿಯಾಣದ ಜಗಧಾರಿ ಪೊಲೀಸ್ ಠಾಣೆಯಲ್ಲಿ ಮೇ 9ರಂದು ವಿಕಾಸ್ ಪ್ರಭಾಕರ್ ಹತ್ಯೆ ಪ್ರಕರಣ ದಾಖಲಾಗಿದೆ.
ಪ್ರಭಾಕರ್ ಅವರು ವಿಎಚ್‌ಪಿಯ ನಂಗಲ್ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದುರಂತವೆಂದರೆ, ಏಪ್ರಿಲ್ 13, 2024 ರಂದು ಪಂಜಾಬ್‌ನ ರೂಪನಗರ ಜಿಲ್ಲೆಯ ನಂಗಲ್ ಪಟ್ಟಣದ ಅವರ ಅಂಗಡಿಯಲ್ಲಿ ಮೋಟಾರ್‌ಸೈಕಲ್‌ನಲ್ಲಿ ಹೋಗುತ್ತಿದ್ದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮಾರಣಾಂತಿಕವಾಗಿ ಗುಂಡು ಹಾರಿಸಿ ಕೊಂದಿದ್ದರು. ಇಬ್ಬರು ದುಷ್ಕರ್ಮಿಗಳು ರೂಪನಗರ ರೈಲು ನಿಲ್ದಾಣದ ಬಳಿ ಇರುವ ಬಗ್ಗಾ ಅವರ ಮಿಠಾಯಿ ಅಂಗಡಿಗೆ ನುಗ್ಗಿ ಅವರ ಮೇಲೆ ಗುಂಡು ಹಾರಿಸಿದರು. ತದನಂತರ ಸ್ಥಳದಿಂದ ಪರಾರಿಯಾಗಿದ್ದರು.
ಪ್ರಭಾಕರ್ ಹತ್ಯೆಯ ಹಿಂದಿನ ದೊಡ್ಡ ಪಿತೂರಿಯನ್ನು ಬಯಲಿಗೆಳೆಯಲು ಕೇಂದ್ರ ಗೃಹ ಸಚಿವಾಲಯವು ಪ್ರಕರಣದ ಕುರಿತು ಎನ್‌ಐಎ ತನಿಖೆಗೆ ಶಿಫಾರಸು ಮಾಡಿತ್ತು. ಆರೋಪಿಗಳ ವಿರುದ್ಧ ಐಪಿಸಿ, ಯುಎ(ಪಿ) ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ಬಗ್ಗೆ ಯಾವುದೇ ಮಾಹಿತಿಯನ್ನು ಸಿಕ್ಕಿದರೆ ಎನ್‌ಐಎ ಪ್ರಧಾನ ಕಚೇರಿಯ ದೂರವಾಣಿ ಸಂಖ್ಯೆ: 011-24368800, WhatsApp/ಟೆಲಿಗ್ರಾಂ: +91-8585931100 ಮತ್ತು ಇಮೇಲ್ ಐಡಿ: do.nia@gov.in ನಲ್ಲಿ ಹಂಚಿಕೊಳ್ಳಬಹುದು ಎಂದು NIA ತಿಳಿಸಿದೆ.
ಇದಲ್ಲದೆ, ದೂರವಾಣಿ ಸಂಖ್ಯೆ: 0172-2682900, 2682901 ಮೂಲಕ ಇಬ್ಬರ ವಿರುದ್ಧ ಮಾಹಿತಿಯನ್ನು ಹಂಚಿಕೊಳ್ಳಲು ಅದರ ಚಂಡೀಗಢ ಕಚೇರಿಯನ್ನು ಸಂಪರ್ಕಿಸಬಹುದು; WhatsApp/ಟೆಲಿಗ್ರಾಮ್ ಸಂಖ್ಯೆ: 7743002947ಮತ್ತು info-chd.nia@gov.in ಕ್ಕೂ ಸಂಪರ್ಕಿಸಬಹುದು ಎಂದು ಎನ್‌ಐಎ ಹೇಳಿದೆ.