ನವದೆಹಲಿ: 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ “ಜೈ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗಿದ್ದ ಎಐಎಂಐಎಂ ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಅವರ ದಿಲ್ಲಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಇನ್ನು ಘಟನೆ ಬಗ್ಗೆ ಸ್ವತಃ ಓವೈಸಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಕೆಲವು ದುಷ್ಕರ್ಮಿಗಳು ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಅದೂ ಅಲ್ಲದೇ ಮನೆಯ ಗೋಡೆಗಳಿಗೆ ಕಪ್ಪು ಮಸಿ ಬಳಿದಿದ್ದಾರೆ. ಒಬ್ಬ ಸಂಸದನಿಗೇ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ? ಘಟನೆ ಬಗ್ಗೆ ದಿಲ್ಲಿ ಪೊಲೀಸರನ್ನು ಕೇಳಿದರೆ ಅವರು ಅಸಾಯಕರಂತೆ ನಿಲ್ಲುತ್ತಿದ್ದಾರೆ. ಅಮಿತ್ ಶಾ ಅವರೇ ನಿಮ್ಮ ಮೂಗಿನ ಕೆಳಗೇ ಹೀಗೆಲ್ಲಾ ನಡೆಯುತ್ತಿದೆ ಸ್ಪೀಕರ್ ಓಂ ಬಿರ್ಲಾ ಅವರೇ ಸಂಸದನಿಗೆ ರಕ್ಷಣೆ ಇದೆಯೋ ಇಲ್ಲವೋ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.
ಈ ‘ಸಾವರ್ಕರ್ ಮಾದರಿಯ ಹೇಡಿತನದ ವರ್ತನೆ’ ನಾನು ಹೆದರುವುದಿಲ್ಲ ಎಂದೂ ಓವೈಸಿ ಹೇಳಿದ್ದಾರೆ. “ನನ್ನ ಮನೆಯನ್ನು ಗುರಿಯಾಗಿಸುವ ಗೂಂಡಾಗಳ ಬಗ್ಗೆ ಹೆದರಿಕೆಯಿಲ್ಲ. ಈ ಸಾವರ್ಕರ್ ಮಾದರಿಯ ಹೇಡಿತನದ ನಡವಳಿಕೆಯನ್ನು ನಿಲ್ಲಿಸಿ. ಸ್ವಲ್ಪ ಮಸಿ ಎಸೆದ ನಂತರ ಅಥವಾ ಕೆಲವು ಕಲ್ಲುಗಳನ್ನು ಹೊಡೆದು ನಂತರ ಓಡಿ ಹೋಗುವಂತಹ ಹೇಡಿತನ ಬೇಡ ಎಂದು ಅವರು ಹೇಳಿದರು. ಸೇರಿಸಲಾಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಿಡಿಗೇಡಿಗಳು ಓವೈಸಿ ನಿವಾಸದ ಎದುರು ಅಳವಡಿಸಿದ್ದ ನೇಮ್‌ಪ್ಲೇಟ್ ಮೇಲೆ ಕಪ್ಪು ಮಸಿ ಬಳಿದು ಓದಿ ಹೋಗಿದ್ದಾರೆ. ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಸಾದುದ್ದೀನ್ ಓವೈಸಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆ ಬಿಜೆಪಿ ಸಂಸದರು ಜೈ ಶ್ರೀರಾಮ್ ಘೋಷಣೆ ಕೂಗಲು ಆರಂಭಿಸಿದ್ದರು. ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ, ‘ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗುವ ಮೂಲಕ ಮುಕ್ತಾಯಗೊಳಿಸಿದರು. 2019 ರಲ್ಲಿ, ಓವೈಸಿ ತಮ್ಮ ಪ್ರಮಾಣವಚನವನ್ನು “ಜೈ ಭೀಮ್, ಅಲ್ಲಾ-ಒ-ಅಕ್ಬರ್ ಮತ್ತು ಜೈ ಹಿಂದ್” ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಓವೈಸಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹಿಂದೂ ಫೈರ್ ಬ್ರಾಂಡ್ ಮಾಧವಿ ಲತಾ ವಿರುದ್ಧ ಗೆಲುವು ಸಾಧಿಸಿದ್ದರು.