ಉಡುಪಿ: ವಾಹನಗಳಿಗೆ ನಾಯಿಗಳು ಅಡ್ಡ ಬಂದು ಅಪಘಾತ ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿವೆ. ಹಠಾತ್ತಾಗಿ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಬೈಕ್‌ನಿಂದ ಕೆಳಗೆ ಬಿದ್ದು ನವವಿವಾಹಿತೆ ಮೃತಪಟ್ಟಿದ್ದಾಳೆ. ಕಾರ್ಕಳ ತೆಳ್ಳಾರು ನಿವಾಸಿ ನೀಕ್ಷಾ ಮೃತಪಟ್ಟವರು.
ಎರಡು ತಿಂಗಳ ಹಿಂದಷ್ಟೇ ವಿಶಾಲ್ ಎಂಬುವರೊಂದಿಗೆ ನೀಕ್ಷಾ ಮದುವೆಯಾಗಿದ್ದರು. ಮಂಗಳೂರು ತೆರಳುವ ಖಾಸಗಿ ಬಸ್ ಏರಲು ಪತಿಯೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಉಡುಪಿಯ ಈದು ಗ್ರಾಮದ ಹೊಸ್ಮಾರು ಸೇತುವೆ ಬಳಿ ಬೈಕ್‌ಗೆ ಅಚಾನಕ್ ಆಗಿ ಶ್ವಾನ ಅಡ್ಡ ಬಂದಿದೆ.
ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದಾಗ ಬೈಕ್‌ನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಮುಗುಚಿ ಬಿದ್ದಿದ್ದಾರೆ. ಬೈಕ್ ಹಿಂಭಾಗದಲ್ಲಿದ್ದ ನೀಕ್ಷಾ, ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರವಾಗಿದೆ. ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ವಿಶಾಲ್ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.