ಲೋಕೋಪಯೋಗಿ ಮತ್ತು ಸಣ್ಣ ನೀರಾವರಿ ಸಚಿವರನ್ನು ಭೇಟಿಯಾದ ಶಾಸಕ ಅಶೋಕ್ ರೈ
ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಮನವಿ
ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈಯವರು ಗುರುವಾರ ಲೋಕೋಪಯೋಗಿ ಸಚಿವ ಹಾಗೂ ಸಣ್ಣ ನೀರಾವರಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವಂತೆ ಮನವಿ ಮಾಡಿದರು.
ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರನ್ನು ಭೇಟಿಯಾದ ಶಾಸಕರು ತನ್ನ ಕ್ಷೇತ್ರದಲ್ಲಿ ರಸ್ತೆ ಕಾಮಗಾರಿಗೆ ಅನುದಾನ ನೀಡಬೇಕು. ಗ್ರಾಮೀಣ ಭಾಗದಲ್ಲಿ ಅನೇಕ ರಸ್ತೆಗಳು ಇನ್ನೂ ಕಾಂಕ್ರೀಟ್ ಕಂಡಿಲ್ಲ. ತಮ್ಮ ಗ್ರಾಮದ ರಸ್ತೆ ಅಭಿವೃದ್ದಿಗೆ ಗ್ರಾಮಸ್ಥರಿಂದ ಬೇಡಿಕೆ ಬರುತ್ತಿದೆ. ಕಾಲು ಸಂಕ, ಸೇತುವೆ ನಿರ್ಮಾಣದ ಬೇಡಿಕೆಯೂ ಇದೆ. ಹಳೆಯ ಸೇತುವೆಗಳ ಮೇಲೆ ವಾಹನಗಳು ಸಂಚರಿಸುವುದು ಕಷ್ಡ ಸಾಧ್ಯವಾಗಿದ್ದು ಹೊಸ ಸೇತುವೆಯ ಬೇಡಿಕೆ ಇದೆ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಲ್ಲಿ ತಮ್ಮ ಇಲಾಖೆಯಿಂದ ಹೆಚ್ಚಿನ ಅನುದಾನವನ್ನು ಒದಗಿಸುವಂತೆ ಸಚಿವರಿಗೆ ಮನವಿ ಮಾಡಿದರು.
ಹಳೆಯ ಕಿಂಡಿ ಅಣೆಕಟ್ಟಿಗೆ ಹಲಗೆ ಜೋಡಿಸಲು ಅನುದಾನ ಅಗತ್ಯವಿದೆ:
ಸಣ್ಣ ನೀರಾವರಿ ಸಚಿವರಾದ ಬೋಸರಾಜು ಅವರನ್ನು ಭೇಟಿಯಾದ ಶಾಸಕರು ಅವರ ಜೊತೆ ಮಾತುಕತೆ ನಡೆಸಿ ಈಗಾಗಲೇ ಕ್ಷೇತ್ರದಲ್ಲಿ ಕಿಂಡಿಅಣೆಕಟ್ಟಿನ ಬೇಡಿಕೆ ಇದೆ. ಇರುವ ಅನುದಾನದಲ್ಲಿ ಬೇಡಿಕೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಕಿಂಡಿಅಣೆ ಕಟ್ಟಿನ ಮೂಲಕ ನೀರು ಇಂಗಿಸಿದರೆ ಕೃಷಿಕರಿಗೆ ಪ್ರಯೋಜನವಾಗುತ್ತದೆ. ಈಗಾಗಲೇ ನಿರ್ಮಾಣಗೊಂಡ ಕಿಂಡಿಅಣೆ ಕಟ್ಟಿಗೆ ಹಲಗೆ ಜೋಡಿಸಲು ಯಾವುದೇ ಅನುದಾನ ನೀಡುತ್ತಿಲ್ಲ. ಅನೇಕವರ್ಷಗಳಿಂದ ಹಳೆಯ ಕಿಂಡಿಅಣೆ ಕಟ್ಟು ಹಲಗೆ ಜೋಡಿಸದೆ ಪಾಳು ಬಿದ್ದಿದ್ದು ನಿಷ್ಪ್ರಯೋಜಕವಾಗಿದೆ ಇದಕ್ಕೆ ವಿಶೇಷ ಅನುದಾನ ನೀಡಬೇಕು ಮತ್ತು ನೀರಾವರಿ ಇಲಾಖೆಯಿಂದ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡುವಂತೆಯೂ ಶಾಸಕರು ಸಚಿವರಲ್ಲಿ ಮನವಿ ಮಾಡಿದರು.