ಜರ್ಮನಿಯ ಅಲಿಯಾನ್ಸ್ ಅರೆನಾ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡಕ್ಕೆ ಸೋಲುಣಿಸಿ ಸ್ಪೇನ್ ಫೈನಲ್ಗೆ ಪ್ರವೇಶಿಸಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಉತ್ತಮ ಪೈಪೋಟಿ ಕಂಡು ಬಂತು. ಅದರಲ್ಲೂ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಫ್ರಾನ್ಸ್ ತಂಡದ ಮುನ್ಪಡೆ ಆಟಗಾರರು ಸತತವಾಗಿ ಸ್ಪೇನ್ ಗೋಲಿನತ್ತ ದಾಳಿ ನಡೆಸಿದ್ದರು. ಪರಿಣಾಮ 8ನೇ ನಿಮಿಷದಲ್ಲಿ ಲೆಫ್ಟ್ ಕಾರ್ನರ್ನಿಂದ ಕಿಲಿಯನ್ ಎಂಬಾಪ್ಪೆ ನೀಡಿದ ಅತ್ಯುತ್ತಮ ಪಾಸ್ ಅನ್ನು ಹೆಡ್ ಮಾಡುವ ಮೂಲಕ ರಾಂಡಲ್ ಕೊಲೊ ಮುವಾನಿ ಗೋಲಾಗಿ ಪರಿವರ್ತಿಸಿದರು.
ಆರಂಭದಲ್ಲೇ 1-0 ಮುನ್ನಡೆ ಪಡೆದ ಫ್ರಾನ್ಸ್ ತಂಡವು ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರೆ, ಸ್ಪೇನ್ ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿದರು. ಅದರಲ್ಲೂ ಸಣ್ಣ ಪಾಸ್ಗಳ ಮೂಲಕವೇ ಫ್ರಾನ್ಸ್ ರಕ್ಷಣಾ ಕೋಟೆ ಬೇಧಿಸಲು ಯತ್ನಿಸಿದ ಸ್ಪೇನ್ ಪಡೆಗೆ ಕೊನೆಗೂ 21ನೇ ನಿಮಿಷದಲ್ಲಿ ಯಶಸ್ಸು ಲಭಿಸಿತು.
ಪಂದ್ಯದ 21ನೇ ನಿಮಿಷದಲ್ಲಿ 16 ವರ್ಷದ ಹದಿಹರೆಯದ ಆಟಗಾರ ಲ್ಯಾಮಿನ್ ಯಮಲ್ ಅತ್ಯುತ್ತಮ ಲಾಂಗ್ ಕಿಕ್ನೊಂದಿಗೆ ಚೆಂಡನ್ನು ಗೋಲು ಬಳೆಯೊಳಗೆ ತಲುಪಿಸಿದರು. ಈ ಮೂಲಕ ಸ್ಪೇನ್ ತಂಡವು 1-1 ಅಂತರದಿಂದ ಸಮಬಲ ಸಾಧಿಸಿತು.
ಸ್ಕೋರ್ಗಳು ಸಮಗೊಳ್ಳುತ್ತಿದ್ದಂತೆ ಹೊಸ ಹುರುಪಿನಲ್ಲಿ ಕಾಣಿಸಿಕೊಮಡ ಸ್ಪೇನ್ ತಂಡವು ಆಕರ್ಷಕ ಪಾಸ್ಗಳೊಂದಿಗೆ ಫ್ರಾನ್ಸ್ ಗೋಲಿನತ್ತ ಸತತ ದಾಳಿ ನಡೆಸಿದರು. ಈ ದಾಳಿ ನಡುವೆ 25ನೇ ನಿಮಿಷದಲ್ಲಿ ಸಿಕ್ಕ ಅತ್ಯುತ್ತಮ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಡ್ಯಾನಿ ಒಲ್ಮೊ ಯಶಸ್ವಿಯಾದರು. ಈ ಮೂಲಕ ಮೊದಲಾರ್ಧದಲ್ಲಿ 2-1 ಅಂತರದಿಂದ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಸ್ಪೇನ್ ತಂಡ ಯಶಸ್ವಿಯಾಯಿತು.
ಇನ್ನು ದ್ವಿತೀಯಾರ್ಧದಲ್ಲಿ ಕಿಲಿಯನ್ ಎಂಬಾಪ್ಪೆ ಹಾಗೂ ರಾಂಡಲ್ ಕೊಲೊ ಮುವಾನಿಯನ್ನು ಕಟ್ಟಿ ಹಾಕಲೆಂದೇ ವಿಶೇಷ ರಣತಂತ್ರದೊಂದಿಗೆ ಕಣಕ್ಕಿಳಿದ ಸ್ಪೇನ್ ರಕ್ಷಣಾ ಪಡೆಯು ಫ್ರಾನ್ಸ್ ತಂಡವನ್ನು ಗೋಲುಗಳಿಸುವಲ್ಲಿ ತಡೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾದರು.
ಇದರ ನಡುವೆ 86ನೇ ನಿಮಿಷದಲ್ಲಿ ಸಿಕ್ಕ ಅತ್ಯುತ್ತಮ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಕಿಲಿಯನ್ ಎಂಬಾಪ್ಪೆ ವಿಫಲವಾದರು. ಕೊನೆಯ ನಿಮಿಷಗಳ ವೇಳೆ ಕಂಡು ಬಂದ ಜಿದ್ದಾಜಿದ್ದಿನ ಹೋರಾಟದ ನಡುವೆ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದ ಸ್ಪೇನ್ ತಂಡವು ಅಂತಿಮವಾಗಿ 2-1 ಗೋಲುಗಳ ಅಂತರದಿಂದ ಗೆದ್ದು ಫೈನಲ್ಗೆ ಪ್ರವೇಶಿಸಿದೆ.
ಈ ಗೆಲುವಿನೊಂದಿಗೆ ಸ್ಪೇನ್ ತಂಡವು 12 ವರ್ಷಗಳ ಬಳಿಕ ಯುರೋ ಕಪ್ಗೆ ಫೈನಲ್ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೂ ಮುನ್ನ 2012 ರಲ್ಲಿ ಯುರೋ ಕಪ್ ಫೈನಲ್ ಆಡಿತ್ತು. ಅಂದು ಇಟಲಿ ತಂಡವನ್ನು 4-0 ಅಂತರದಿಂದ ಮಣಿಸಿ ಸ್ಪೇನ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಹನ್ನೆರಡು ವರ್ಷಗಳ ಬಳಿಕ ಸ್ಪೇನ್ ತಂಡವು ಮತ್ತೆ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಅಲ್ಲದೆ ಇಂಗ್ಲೆಂಡ್ ಮತ್ತು ನೆದರ್ಲೆಂಡ್ಸ್ ನಡುವಣ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ಫೈನಲ್ ಆಡಲಿದೆ.