ಪಣಜಿ: ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಮಾಡಿದ ತಪ್ಪುಗಳನ್ನು ನಾವು ಕೂಡ ಮಾಡಿದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಎಚ್ಚರಿಸಿದ್ದಾರೆ. ಗೋವಾದ ರಾಜ್ಯ ಬಿಜಿಪಿ ಕಾರ್ಯಕಾರಿಣಿ ಉದ್ದೇಶಿಸಿ ಮಾತನಾಡಿದ ಸಚಿವ ಗಡ್ಕರಿ ಅವರು ನಾಯಕರಿಗೆ ಕಿವಿಮಾತು ಹೇಳಿದರು.
”ಬಿಜೆಪಿ ಪಕ್ಷವು ವಿಭಿನ್ನತೆಗೆ ಹೆಸರುವಾಸಿ. ಇತರ ಪಕ್ಷಗಳಿಗಿಂತ ನಾವು ಭಿನ್ನ. ಅವರಂತೆ ತಪ್ಪು ಮಾಡಬಾರದು. ಭ್ರಷ್ಟಾಚಾರ ಮುಕ್ತ ದೇಶ ಕಟ್ಟುವ ಕೆಲಸ ಆಗಬೇಕಿದೆ,” ಎಂದರು.
“ಕಾಂಗ್ರೆಸ್ ಮಾಡುತ್ತಿದ್ದ ತಪ್ಪುಗಳನ್ನೇ ನಾವು ಮುಂದುವರಿಸಿದರೆ ಅವರ ನಿರ್ಗಮನ ಮತ್ತು ನಮ್ಮ ಆಗಮನದಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಗಡ್ಕರಿ ಹೇಳಿದರು.
ಪಕ್ಷದ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ ಗಡ್ಕರಿ, “ಬಿಜೆಪಿ ವಿಭಿನ್ನತೆಗೆ ಹೆಸರಾದ ಪಕ್ಷ” ಎಂದರು. ನಾವು ಇತರೆ ಪಕ್ಷಗಳಿಗಿಂತ ನಾವು ಹೇಗೆ ವಿಭಿನ್ನ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್ ಮಾಡುತ್ತಿದ್ದ ತಪ್ಪುಗಳಿಂದಾಗಿ ಜನರು ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ. ಪಕ್ಷದ ನಾಯಕತ್ವವು ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗಳನ್ನು ತರಲು ರಾಜಕೀಯವು ಸಾಧನ ಎಂಬುದನ್ನು ಅರಿತುಕೊಳ್ಳಬೇಕು ಎಂದರು.