ತಿರುವನಂತಪುರಂ : ಹಿಂದೂ ಪುರಾಣ ಪ್ರಸಿದ್ದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ (ತಂತ್ರಿ) ಕಂಟರಾರು ರಾಜೀವಾರು ಅವರಿಗೆ, ಪೂಜಾ ವಿಧಿವಿಧಾನದಲ್ಲಿ ನೆರವಾಗಲು ಅವರ ಪುತ್ರ ಸ್ಕಾಟ್‌ಲ್ಯಾಂಡ್ ನಲ್ಲಿ ವಿದ್ಯಾಭ್ಯಾಸ ಮಾಡಿ ಬಂದು, ದೇಶದ ಹೈಪ್ರೊಫೈಲ್ ಹುದ್ದೆ ಬಿಟ್ಟು ಬಂದು ಶಾಸ್ತ್ರವನ್ನು ಕಲಿಯುತ್ತಿದ್ದಾರೆ.
ಮುಂಬರುವ ಆಗಸ್ಟ್ 16ರಂದು ಚಿಂಗಂ ಮಾಸಿಕ ಪೂಜೆಯ ನಿಮಿತ್ತ ಶಬರಿಮಲೆ ದೇವಾಲಯದ ಬಾಗಿಲು ತೆರೆಯಲಿದೆ. 16 ರಿಂದ 21ರವರೆಗೆ ದೇವಾಲಯ ತೆರೆಯಲಿದ್ದು, ಭಕ್ತಾದಿಗಳಿಗೆ ಆಗಸ್ಟ್ 21ರ ರಾತ್ರಿ 10ಗಂಟೆಯವರೆಗೆ ದರ್ಶನವನ್ನು ಪಡೆದುಕೊಳ್ಳಬಹುದಾಗಿದೆ.
ಆಗಸ್ಟ್ ತಿಂಗಳ ಪೂಜೆಯ ವೇಳೆ ಹಾಲೀ ಪ್ರಧಾನ ಅರ್ಚಕರು ತಮ್ಮ ಮಗನಿಗೆ ದೇವಾಲಯದ ಪೂಜೆಯ ಜವಾಬ್ದಾರಿಯನ್ನು ಹಸ್ತಾಂತರಿಸಲಿದ್ದಾರೆ ಎಂದು ವರದಿಯಾಗಿತ್ತು. ಈಗಿನ ತಂತ್ರಿಗಳಾದ ರಾಜೀವಾರು ಈ ವಿಚಾರವನ್ನು ಅಲ್ಲಗಳೆದಿದ್ದಾರೆ ಎಂದು ಮನೋರಮಾ ಪತ್ರಿಕೆ ವರದಿ ಮಾಡಿದೆ.
ಕಂಟರಾರು ರಾಜೀವಾರು ಅವರು ತಮ್ಮ ಪುತ್ರ ಬ್ರಹ್ಮದತ್ತ ಕಂಟರಾರು ಅವರಿಗೆ ಪೂಜೆಯ ಉಸ್ತುವಾರಿಯನ್ನು ನೀಡಲಿದ್ದಾರೆ ಎನ್ನುವ ಸುದ್ದಿಯ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ” ಈ ರೀತಿಯ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೆ ಎನ್ನುವುದೇ ಆಶ್ಚರ್ಯ. ಮಗನಿಗೆ ಪೂಜೆಯ ಜವಾಬ್ದಾರಿಯನ್ನು ಹಸ್ತಾಂತರಿಸುವ ಯಾವ ಆಲೋಚನೆಯೂ ಸದ್ಯಕ್ಕೆ ಇಲ್ಲ ” ಎಂದು ತಂತ್ರಿಗಳು ಹೇಳಿದ್ದಾರೆ.
ನನ್ನ ಮಗ ಹಿಂದಿನಿಂದಲೂ ನನಗೆ ಪೂಜೆಗೆ ನೆರವಾಗುತ್ತಿದ್ದ, ಈ ವರ್ಷದ ಪೂಜೆಗೂ ಅದನ್ನು ಅವನು ಮುಂದುವರಿಸಿಕೊಂಡು ಹೋಗುತ್ತಾನೆ. ನಮ್ಮ ತಲೆಮಾರಿನ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಲು ಪೂರ್ಣ ಪ್ರಮಾಣದಲ್ಲಿ ಇಲ್ಲೇ ಬ್ರಹ್ಮದತ್ತ ಇರಲಿದ್ದಾರೆ ಎಂದು ತಂತ್ರಿಗಳಾದ ಕಂಡರಾರು ರಾಜೀವಾರು ಹೇಳಿದ್ದಾರೆ. ಶಬರಿಮಲೆ ಅಯ್ಯಪ್ಪ ದೇವಾಲಯದ ಪೂಜೆ ನಮ್ಮ ಕುಟುಂಬಕ್ಕೆ ಬಂದ ಸೌಭಾಗ್ಯ, ಇದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಕುಟುಂಬದ ಕರ್ತವ್ಯ. ಹಾಗಾಗಿ, ಪ್ರಧಾನ ತಂತ್ರಿಗಳಾದ ನನ್ನ ತಂದೆಗೆ ಪೂಜೆಗೆ ನೆರವಾಗಲು ಪೂರ್ಣ ಸಮಯ ಇಲ್ಲೇ ಇರುತ್ತೇನೆ, ಧರ್ಮಶಾಸ್ತ್ರವನ್ನು ಕಲಿಯುತ್ತೇನೆ ಎಂದು ಬ್ರಹ್ಮದತ್ತ ಕಂಟರಾರು ಹೇಳಿದ್ದರು.
ಜಾಗತಿಕ ಪರಿಸರ ಕಾನೂನಿನಲ್ಲಿ ಮಾಸ್ಟರ್ ಆಫ್ ಲಾ ಪದವೀಧರಾಗಿರುವ ಬ್ರಹ್ಮದತ್ತ, ಗ್ಲ್ಯಾಸ್ಗೋ ಸ್ಕಾಟ್‌ಲ್ಯಾಂಡ್ ನಲ್ಲಿರುವ ಸ್ಟ್ರಾತ್ ಕ್ಲೈಡ್ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಇದಾದ ನಂತರ, ಹೈದರಾಬಾದ್ ನಲ್ಲಿ ಡಿಲಾಯಿಟ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಲ್‌ಎಲ್‌ಬಿ ಮುಗಿಸಿದ ನಂತರ, ಕೇರಳದ ಕೊಟ್ಟಾಯಂನಲ್ಲಿ ವಕೀಲ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇದಾದ ನಂತರ, ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿ ಮೂರು ವರ್ಷಗಳ ಇಂಟೆನ್ಶಿಪ್, ಸ್ಕಾಟ್‌ಲ್ಯಾಂಡ್ ನಲ್ಲಿ ಮಾಡಿದ್ದರು. ಪರಿಸರ ಕಾನೂನಿಗೆ ಸಂಬಂಧಿಸಿದಂತೆ ವಿದ್ಯಾರ್ಜನೆ ಮಾಡುವುದು ನನ್ನ ಉದ್ದೇಶವಾಗಿತ್ತು. ಈಗ, ನನ್ನ ತಂದೆಯವರಿಂದ ಪೂಜಾ ವಿಧಿವಿಧಾನಗಳನ್ನು ಕಲಿಯುತ್ತಿದ್ದೇನೆ. ಆ ಮೂಲಕ, ತಂದೆಯ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಸ್ಥಾನ ನಿಭಾಯಿಸುವುದು ನನ್ನ ಗುರಿ ಎಂದು ಬ್ರಹ್ಮದತ್ತ ಕಂಟರಾರು ಹೇಳಿದ್ದಾರೆ. ಶಬರಿಮಲೆ ದೇವಾಲಯದ ಪೂಜೆಯ ಜವಾಬ್ದಾರಿ ಕಂಡರಾರು ಮತ್ತು ತಾಜಮೋನ್ ಕುಟುಂಬದ ನಡುವೆ ವರ್ಷಕ್ಕೊಮ್ಮೆ ಹಸ್ತಾಂತರವಾಗುತ್ತದೆ.