ಬೆಂಗಳೂರು: ಧರಿಸಿದ ಬಟ್ಟೆ ನೋಡಿ ಮನುಷ್ಯನಿಗೆ ಮಣೆ ಹಾಕಬಾರದು ಎಂಬ ಮಾತಿಗೆ ಈ ಘಟನೆ ಉದಾಹರಣೆ.
ಬೆಂಗಳೂರಿನ ಜಿಟಿ ಮಾಲ್‌ಗೆ 60 ವರ್ಷ ವಯಸ್ಸಿನ ಫಕೀರಪ್ಪ ಎಂಬ ರೈತರು ಸಾಂಪ್ರದಾಯಿಕ ಧೋತಿ ಮತ್ತು ಶರ್ಟ್ ಧರಿಸಿದ ಬಂದಿದ್ದರು ಎಂಬ ಕಾರಣಕ್ಕೆ ಒಳಗೆ ಬಿಡಲಿಲ್ಲ. ನಿನ್ನೆ ಅವರು ತಮ್ಮ ಮಗ ಮತ್ತು ಇಡೀ ಕುಟುಂಬದೊಂದಿಗೆ ಕಲ್ಕಿ ಸಿನಿಮಾ ವೀಕ್ಷಣೆಗೆ ಬಂದಿದ್ದರು. ರೈತ ಮತ್ತು ಅವರ ಮಗ ಮಂಗಳವಾರ ಚಲನಚಿತ್ರವನ್ನು ವೀಕ್ಷಿಸಲು ಮಾಲ್‌ಗೆ ಹೋಗಿದ್ದಾರೆ, ಆದರೆ ಭದ್ರತಾ ಸಿಬ್ಬಂದಿ ಅವರ ಪ್ರವೇಶಕ್ಕೆ ಸೂಕ್ತವಲ್ಲ ಎಂದು ಪರಿಗಣಿಸಿದ್ದಾರೆ.
ನಡೆದ ಘಟನೆಯೇನು?:
ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಹಾವೇರಿಯ ನಾಗರಾಜ್ ತನ್ನ ತಂದೆಯೊಂದಿಗೆ ಮಾಗಡಿ ರಸ್ತೆಯ ಜಿಟಿ ಮಾಲ್‌ಗೆ ಸಿನಿಮಾ ವೀಕ್ಷಿಸಲು ತೆರಳಿದ್ದ ವೇಳೆ ಘಟನೆ ನಡೆದಿದೆ. ಇವರು ಹಾವೇರಿ ಮೂಲದವರಾಗಿದ್ದು, ರೈತ ನಾಗರಾಜ್ ಅವರ ತಂದೆ ಸಾಂಪ್ರದಾಯಿಕ ರೈತ ಉಡುಗೆ ತೊಟ್ಟಿದ್ದ ಕಾರಣ ಮಾಲ್ ಸಿಬ್ಬಂದಿ ಇಬ್ಬರನ್ನು ಮುಖ್ಯ ಪ್ರವೇಶಕ್ಕೆ ತಡೆದಿದ್ದಾರೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸಿಬ್ಬಂದಿಗೆ ಮನವಿ ಮಾಡಿದರೂ ಪ್ರವೇಶ ನಿರಾಕರಿಸಲಾಯಿತು. ನಾಗರಾಜ್ ಮೇಲ್ವಿಚಾರಕರನ್ನು ಪ್ರಶ್ನಿಸಿದಾಗ, ಉನ್ನತ ಅಧಿಕಾರಿಗಳು ಇಂತಹ ಬಟ್ಟೆ ಧರಿಸಿದವರನ್ನು ಒಳಗೆ ಬಿಡಬಾರದು ಎಂದು ಆದೇಶ ನೀಡಿದ್ದಾರೆ ಎಂದಿದ್ದಾರೆ.
ಇದಕ್ಕೆ ಬೇಸರದಿಂದ ನಾಗರಾಜ್ ತಮ್ಮ ಮೊಬೈಲ್ ನಲ್ಲಿ ವಿಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು. ಅದು ವೈರಲ್ ಆಗಿ ರೈತಪರ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳ ಸದಸ್ಯರ ಕಣ್ಣಿಗೆ ಬಿದ್ದಿದೆ. ಅವರು ಇಂದು ಬೆಳಗ್ಗೆ ಮಾಲ್ ನ ಮುಂದೆ ಬಂದು ಪ್ರತಿಭಟನೆ ನಡೆಸಿದ್ದರು.
ಸುದ್ದಿ ಮಾಧ್ಯಮಗಳಲ್ಲಿ ಇಂದು ವ್ಯಾಪಕವಾಗಿ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಮಾಲ್ ಮಾಲೀಕರು ಒಳಗೆ ಬಿಡದ ವಾಚ್ ಮೆನ್ ನ್ನು ಕೆಲಸದಿಂದ ವಜಾ ಮಾಡಿದ್ದಲ್ಲದೆ ರೈತ ಫಕೀರಪ್ಪನನ್ನು ಕರೆದು ಮಾಲ್ ನಲ್ಲಿ ಇಂದು ಸನ್ಮಾನಿಸಿದ್ದಾರೆ. ಮಾಲ್ ಇನ್ಚಾರ್ಜ್ ಸುರೇಶ್ ಅವರು ಫಕೀರಪ್ಪಗೆ ಕ್ಷಮೆಯಾಚಿಸಿದ್ದಾರೆ.
ರೈತ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಈ ಬಗ್ಗೆ ಮಾತನಾಡಿದ, ಜಿ.ಟಿ.ಮಾಲ್ ನಲ್ಲಿ ವೇಷಭೂಷಣದ ಕಾರಣಕ್ಕೆ ರೈತರೊಬ್ಬರಿಗೆ ಪ್ರವೇಶ ನಿರಾಕರಿಸಿರುವ ಘಟನೆ ನಾಚಿಕೆಗೇಡಿನ ಸಂಗತಿ. ಬೆಂಗಳೂರು ಪೊಲೀಸರು ಕೂಡಲೇ ಮಾಲ್ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಾಲ್ ಮಾಲೀಕರು ರೈತನ ಕ್ಷಮೆ ಕೇಳಬೇಕು; ಇಲ್ಲದಿದ್ದರೆ ರಾಜ್ಯದ ನೂರಾರು ರೈತರು ಮಾಲ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ರೈತರಿಲ್ಲದೆ ಮಾಲ್ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಮಾಲ್ ಮಾಲೀಕರು ಆಹಾರ ಸೇವಿಸುತ್ತಿದ್ದರೆ, ಅವರು ಈ ರೀತಿ ವರ್ತಿಸುತ್ತಿರಲಿಲ್ಲ. ರೈತರು ದೇಶದ ಬೆನ್ನೆಲುಬು ಎಂದು ಹೇಳಿದ್ದರು.
ಕೃಷ್ಣ ಭೈರೇಗೌಡ ಪ್ರತಿಕ್ರಿಯೆ:
ಈ ಘಟನೆ ಸಂಬಂಧ ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಪ್ರತಿಕ್ರಿಯೆ ನೀಡಿದ್ದು, ಮುಖ ನೋಡಿ, ಬಟ್ಟೆ ನೋಡಿ ಒಬ್ಬ ವ್ಯಕ್ತಿಯನ್ನು ಅಳೆಯಬಾರದು. ಇದೊಂದು ಬ್ರಿಟಿಷರ ಮನಸ್ಥಿತಿ, ನಮ್ಮನ್ನು ಆಳಿದವರ ಮೈಂಡ್ಸೆಟ್. ಜಿ.ಟಿ.ಮಾಲ್ ಅಷ್ಟೇ ಅಲ್ಲ, ಬೇರೆ ಕಡೆಯೂ ಇಂತಹ ರೀತಿ ನಡೆದಿವೆ. ಅರಿವಿನ ಕೊರತೆ ಇದೆಯೋ, ದುರಹಂಕಾರದಿಂದ ಮಾಡುತ್ತಿದ್ದಾರೋ? ಜಿ.ಟಿ.ಮಾಲ್ನವರು ಹಾಗೇ ನಡೆದುಕೊಂಡಿದ್ದು ತಪ್ಪು, ಖಂಡನೀಯ. ಮುಖ ನೋಡಿ ಗೌರವ ಕೊಡುವುದು ಖಂಡನೀಯ ಎಂದರು.
ಇತ್ತೀಚಿಗೆ ರೈತನೊಬ್ಬನಿಗೆ ನಮ್ಮ ಮೆಟ್ರೋದಲ್ಲಿ ಪ್ರವೇಶ ನಿರಾಕರಿಸಲಾಗಿತ್ತು. ಭದ್ರತಾ ಸಿಬ್ಬಂದಿ ಅವರ ಉಡುಪು ಕಂಡು ಪ್ರಯಾಣಕ್ಕೆ ಅನುಚಿತ ಎಂದು ಬಿಟ್ಟಿರಲಿಲ್ಲ. ಈ ಘಟನೆಯ ನಂತರ ಭದ್ರತಾ ಮೇಲ್ವಿಚಾರಕನನ್ನು ವಜಾಗೊಳಿಸಲಾಗಿತ್ತು.