ದುಬೈ: ದುಬೈ ಆಡಳಿತಗಾರ ಹಾಗೂ ಪ್ರಧಾನಿಯ ಮಗಳು ರಾಜಕುಮಾರಿ ಶೇಖಾ ಮಹ್ರಾ ಬಿಂಟ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಪತಿಗೆ ಸಾರ್ವಜನಿಕವಾಗಿ ‘ವಿಚ್ಛೇದನ’ ಘೋಷಿಸಿದ್ದಾರೆ. ಪತಿ ಶೇಖ್ ಮಾನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮಾನಾ ಅಲ್ ಮಕ್ತೌಮ್ ಅವರಿಗೆ ಇನ್‌ಸ್ಟಾಗ್ರಾಂನಲ್ಲಿ ವಿಚ್ಛೇದನ ನೀಡಿರುವುದು ಸಂಚಲನ ಮೂಡಿಸಿದೆ.
ಈ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡನೇ ತಿಂಗಳಲ್ಲಿ ವಿಚ್ಛೇದನದ ಪ್ರಕಟಣೆ ಹೊರಬಂದಿದೆ. “ಪ್ರಿಯ ಪತಿ, ನೀವು ಇತರೆ ಸಂಗಾತಿಗಳ ಜತೆ ತೊಡಗಿರುವ ಕಾರಣದಿಂದ, ನಾನು ನಮ್ಮ ವಿಚ್ಛೇದನವನ್ನು ಘೋಷಿಸುತ್ತಿದ್ದೇನೆ. ಐ ಡಿವೋರ್ಸ್ ಯು, ಐ ಡಿವೋರ್ಸ್ ಯು, ಆಂಡ್ ಐ ಡಿವೋರ್ಸ್ ಯು. ಟೇಕ್ ಕೇರ್. ನಿಮ್ಮ ಮಾಜಿ ಪತ್ನಿ” ಎಂದು ಶೇಖಾ ಮಹ್ರಾ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಇದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಈ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿರುವುದು ಹಾಗೂ ತಮ್ಮ ತಮ್ಮ ಪ್ರೊಫೈಲ್‌ಗಳಲ್ಲಿ ಇದ್ದ ತಮ್ಮಿಬ್ಬರ ಎಲ್ಲ ಚಿತ್ರಗಳನ್ನೂ ಡಿಲೀಟ್ ಮಾಡಿರುವುದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಿಸಿದ್ದಾರೆ. ಈ ಜೋಡಿ ಒಬ್ಬರನ್ನೊಬ್ಬರು ಬ್ಲಾಕ್ ಮಾಡಿಕೊಂಡಿದ್ದಾರೆ ಎಂದೂ ಊಹಾಪೋಹ ಹರಡಿದೆ. ಈ ನಡುವೆ ರಾಜಕುಮಾರಿ ಶೇಖ್ ಮಹ್ರಾ ಅವರ ಖಾತೆಯನ್ನು ಯಾರಾದರೂ ಹ್ಯಾಕ್ ಮಾಡಿರಬಹುದೇ ಎಂದೂ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ಶೇಖಾ ಮಹ್ರಾ ಅವರು ದುಬೈನ ಆಡಳಿತಗಾರ, ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮೌಕ್ತಮ್ ಅವರ ಮಗಳು. ಮಹಿಳಾ ಸಬಲೀಕರಣ ಹಾಗೂ ಸ್ಥಳೀಯ ವಿನ್ಯಾಸಗಾರರ ಪರ ಶೇಖಾ ಮಹ್ರಾ ಧ್ವನಿ ಎತ್ತುತ್ತಿರುತ್ತಾರೆ. ಬ್ರಿಟನ್‌ನಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಪದವಿ ಪಡೆದಿರುವ ರಾಜಕುಮಾರಿ, ಹಲವಾರು ಉದ್ಯಮ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.