ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಮತ್ತೆ ವಾಲ್ಮೀಕಿ ನಿಗಮದ ಹಗರಣದ ವಿಚಾರವಾಗಿ ವಾಗ್ದಾಳಿ ನಡೆದಿದ್ದು, ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಿರುದ್ದ ಸ್ಪೀಕರ್ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ವಿಧಾನಸಭೆ ಅಧಿವೇಶನದಲ್ಲಿ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಯುಟಿ ಖಾದರ್ ಗದರಿದ ಪ್ರಸಂಗ ನಡೆಯಿತು. ಮಾತನಾಡಲು ಅವಕಾಶ ಕೇಳಿದ್ದ ಪ್ರದೀಪ್ ಈಶ್ವರ್‌ಗೆ ಸ್ಪೀಕರ್ ಖಾದರ್ ಅವಕಾಶ ಕೊಟ್ಟಿದ್ದರು.
ಆದರೆ ಈ ವೇಳೆ ಸದನದ ಬಾವಿಗಿಳಿದಿದ್ದ ಪ್ರತಿಪಕ್ಷ ಸದಸ್ಯರು ವಾಲ್ಮೀಕ ಹಗರಣದ ಕುರಿತು ಘೋಷಣೆ ಕೂಗುತ್ತಿದ್ದರು. ಇದರಿಂದ ಕೆರಳಿದ ಶಾಸಕ ಪ್ರದೀಪ್ ಈಶ್ವರ್ ಬಿಜೆಪಿ ಸರ್ಕಾರದ ಹಲವು ಹಗರಣಗಳು ನಡೆದಿದೆ ಎಂದು ಹೇಳಿ ಪಟ್ಟಿಯನ್ನೇ ನೀಡಿದರು. ಆದರೆ ಈ ವೇಳೆ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಮಾತನಾಡದ ಪ್ರದೀಪ್ ಈಶ್ವರ್, ಬಿಜೆಪಿ ವಿರುದ್ಧ ಆಕ್ರೋಶದ ಮಾತುಗಳನ್ನು ಆಡಿದರು. ಬಿಜೆಪಿ ಅವಧಿಯಲ್ಲಿ ಹಗರಣ ನಡೆದಿದೆ ಅಂತ ಆಕ್ರೋಶ ವ್ಯಕ್ತಪಡಿಸಿ, ಏರು ದನಿಯಲ್ಲಿ ಕಿರುಚಾಡಿದ್ರು.
ಇದಕ್ಕೆ ಗರಂ ಆದ ಸ್ಪೀಕರ್ ಖಾದರ್, ಪ್ರದೀಪ್ ಈಶ್ವರ್‌ಗೆ ಗದರಿದ್ರು. ಪ್ರದೀಪ್ ಈಶ್ವರ್ ಕೈಗೆ ಕಬ್ಬಿಣ ಏನಾದ್ರೂ ಕೊಡ್ರಿ ಅಂತ ಖಾದರ್ ಬೈಯ್ದರು. ಕುಳಿತು ಕೊಳ್ಳುವಂತೆ ಸಾವಧಾನದಿಂದಲೇ ಸ್ಪೀಕರ್ ಹೇಳಿದ್ರು. ಆದ್ರೆ ಪ್ರದೀಪ್ ಈಶ್ವರ್ ಕೇಳಲೇ ಇಲ್ಲ. ಆಗ ಖಾದರ್ ಗರಂ ಆದ್ರು. ಪ್ರದೀಪ್ ಈಶ್ವರ್, ಕುಳಿತುಕೊಳ್ರೀ, ನಿಮ್ಮ ಕೈಗೆ ಕಬ್ಬಿಣ ಕೊಡ್ಬೇಕಾ ಅಂತ ಗದರಿಸಿದ್ರು.
ಇಷ್ಟಾದರೂ ಪ್ರದೀಪ್ ಈಶ್ವರ್ ಕುಳಿತುಕೊಳ್ಳದೇ ಕೂಗಾಟ ಮುಂದುವರೆಸಿದರು. ಸ್ಪೀಕರ್ ಆದೇಶಿಸಿದ್ರೂ ಮಾತು ನಿಲ್ಲಿಸದಿದ್ದರಿಂದ ಕೊನೆಗೆ ಪ್ರದೀಪ್ ಈಶ್ವರ್ ಬಳಿ ಸರ್ಕಾರಿ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹೋಗಿ ಸಮಾಧಾನ ಮಾಡಿದ್ರು. ಕುಳಿತುಕೊಳ್ಳುವಂತೆ ಕೈ ಮುಗಿದು ಮನವಿ ಮಾಡಿದರು. ನಂತರ ಪ್ರದೀಪ್ ಬಳಿ ಹೋಗಿ ಕುಳಿತುಕೊಳ್ಳುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.