ವಯನಾಡಿನಲ್ಲಿ ಸಂಭವಿಸಿದ ಭೀಕರ ಭೂಕುಸಿತ 340ಕ್ಕೂ ಹೆಚ್ಚು ಮಂದಿಯ ಪ್ರಾಣವನ್ನು ಕಸಿದುಕೊಂಡಿದ್ದು, ನೂರಾರು ಮಂದಿ ಕಾಣೆಯಾಗಿದ್ದಾರೆ . ನಾಪತ್ತೆಯಾದವರ ರಕ್ಷಣೆಗಾಗಿ ಸೇನೆ, ಅರಣ್ಯ ಇಲಾಖೆ ಸಿಬ್ಬಂದಿ, ಎನ್‌ಡಿಆರ್‌ಎಫ್ ಪಡೆ, ಸ್ಥಳೀಯರು, ವಿವಿಧ ಸಂಘ ಸಂಸ್ಥೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲಾಗುತ್ತದೆ. ಈ ಮಧ್ಯೆ ದಟ್ಟ ಅರಣ್ಯದೊಳಗೆ ಆಹಾರವಿಲ್ಲದೆ ಜೀವ ಕೈಯಲ್ಲಿ ಹಿಡಿದು ಕುಳಿತಿದ್ದ ಬುಡಕಟ್ಟು ಕುಟುಂಬವೊಂದನ್ನು ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿ ಕಾಪಾಡಿದೆ. ಮಗುವನ್ನು ಅಧಿಕಾರಿಗಳು ಎತ್ತಿಕೊಂಡು ಬರುತ್ತಿರುವ ಫೊಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮೆಪ್ಪಾಡಿಯ ಸೂಜಿಪ್ಪಾರ ಜಲಪಾತವಿರುವ ಎರಾಕುಂಡ್ ಅರಣ್ಯ ಪ್ರದೇಶದಲ್ಲಿದ್ದ ಕೃಷ್ಣನ್, ಅವರ ಪತ್ನಿ ಶಾಂತಾ ಮತ್ತು ನಾಲ್ಕು ಮಕ್ಕಳನ್ನು ಒಳಗೊಂಡ ಕುಟುಂಬವನ್ನು ನಾಲ್ವರು ಅರಣ್ಯಾಧಿಗಳ ಗುಂಪು ಸತತ ಎಂಟು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. 10 ಹಗ್ಗಗಳನ್ನು ಸೇರಿಸಿ ಕಟ್ಟಿ ಈ ಕಾರ್ಯಾಚರಣೆ ನಡೆಸಲಾಗಿದೆ.
ಕಲ್ಪೆಟ್ಟ ರೇಂಜ್ ಫಾರೆಸ್ಟ್ ಆಫೀಸರ್ ಕೆ.ಆಶೀಫ್, ಮುಂಡಕೈ ಸೆಕ್ಷನ್ ಫಾರೆಸ್ಟ್ ಆಫೀಸರ್ ಜಯಚಂದ್ರನ್, ಕಲ್ಪೆಟ್ಟ ರೇಂಜ್ ಬೀಟ್ ಫಾರೆಸ್ಟ್ ಆಫೀಸರ್ ಕೆ.ಅನಿಲ್ ಕುಮಾರ್ ಮತ್ತು ಕಲ್ಪೆಟ್ಟ ಆರ್.ಆರ್.ಡಿ. ಅನೂಪ್ ತೋಮಸ್ ಅವರನ್ನೊಳಗೊಂಡ ಗುಂಪು ಅತ್ಯಂತ ಸಾಹಸಿಕವಾಗಿ ಈ ಆದಿವಾಸಿ ಕುಟುಂಬನ್ನು ಕಾಪಾಡಿದೆ.
ಕಾಡಿನಲ್ಲಿ ಗುಡಿಸಲೊಂದರಲ್ಲಿ ಜೀವಿಸುತ್ತಿದ್ದ ಈ ಕುಟುಂಬ ಆಹಾರವಿಲ್ಲದೆ ಕಾಡಿನಲ್ಲಿ ಅಲೆದಾಡುತ್ತಿದ್ದಾಗ ಅರಣ್ಯಾಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಬಳಿಕ ಅರಣ್ಯಾಧಿಕಾರಿಗಳು ಅವರನ್ನು ಕರೆದೊಯ್ಯಲು ಮುಂದಾಗಿದ್ದಾರೆ. ಮೊದ ಮೊದಲು ಅವರು ಬರಲು ನಿರಾಕರಿಸಿದರು. ಬಳಿಕ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥ ಮಾಡಿಸಿದ ಬಳಿಕ ನಮ್ಮೊಂದಿಗೆ ಬರಲು ಒಪ್ಪಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪೈಕಿ ಚಿಕ್ಕ ಚಿಕ್ಕ ಮಕ್ಕಳಿಗೆ ಬಟ್ಟೆ ಇರಲಿಲ್ಲ. ಚಳಿಯಿಂದ ನಡುಗುತ್ತಿದ್ದರು. ನಮ್ಮ ಬಟ್ಟೆಯನ್ನು ಅವರಿಗೆ ತೊಡಿಸಿ ಎದೆಗವುಚಿಕೊಂಡು ಅವರನ್ನು ಹೊರ ಕರೆ ತಂದೆವು ಎಂದು ಅವರು ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳ ಈ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.