ಪುತ್ತೂರು: ಸಂಘದಲ್ಲಿ ಸದಸ್ಯತ್ವ ಅಭಿಯಾನ ಆಗಬೇಕು, ಸಮಾಜದಲ್ಲಿ ಒಗ್ಗಟ್ಟು ಇರಬೇಕು. ಅದೇ ರೀತಿ ಜಿಲ್ಲೆಯಲ್ಲಿ ನಮ್ಮ ಸಂಘಟನೆ ಬಲಪಡಿಸಲು ಸಂಘ ಬೇಕು. ಆದರೆ ಅಲ್ಲಿ ಎರಡು ಸಂಘಟನೆ ಇದ್ದರೆ ನಮ್ಮ ಬೆಂಬಲವಿಲ್ಲ. ಯಾವುದಾದರೂ ಒಂದೇ ಸಂಘ ಇರಬೇಕು. ಏನಾದರು ವ್ಯತ್ಯಾಸ ಇದ್ದರೆ ಅದನ್ನು ಸರಿದೂಗಿಸಿ ಮುಂದೆ ಹೋಗಬೇಕು.
ಹಾಗಾಗಿ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಪುತ್ತೂರು ಸಂಘದ ಬೆಂಬಲ ನೀಡಲು ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ಮಹಾಸಭೆಯಲ್ಲಿ ನಿರ್ಣಯ ಮಾಡಲಾಗಿದೆ.
ಮಹಾಸಭೆ ಆ.4ರಂದು ಮಧ್ಯಾಹ್ನ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಂಘದ ಸಲಹಾ ಸಮಿತಿ ಗೌರವಾಧ್ಯಕ್ಷ ಸಂಜೀವ ಮಠಂದೂರು ಅವರು ಪ್ರಸ್ತಾಪಿಸಿದಂತೆ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಮಾತ್ರ ಬೆಂಬಲ ನೀಡುವ ಕುರಿತು ನಿರ್ಣಯಿಸಲಾಯಿತು.
ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಅಧ್ಯಕ್ಷೀಯ ಮಾತಿನಲ್ಲಿ ಸಮಾಜದ ಒಳಿತಿಗಾಗಿ ಸಂಘ ಇರಬೇಕು. ಹಾಗಾಗಿ ಜಿಲ್ಲೆಯಲ್ಲಿ ಒಂದೇ ಸಂಘವಿದ್ದರೆ ಪುತ್ತೂರು ತಾಲೂಕು ಸಂಘ ಬೆಂಬಲ ನೀಡಲಿದೆ ಎಂದು ಹೇಳಿದರು.
ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಗೌರವಾಧ್ಯಕ್ಷರೂ ಆದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಗೌಡ ಸಮಾಜ ಬಲಿಷ್ಠವಾಗಿದ್ದು ಇದನ್ನು ಉಳಿಸುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸದಸ್ಯತ್ವ ಅಭಿಯಾನ ಅಗತ್ಯವಾಗಿ ನಡೆಯಬೇಕು. ಪರಿವರ್ತನೆ ಕಾಲದಲ್ಲಿ ಗೌಡ ಸಮಾಜದಿಂದ ಸದಸ್ಯತನ ಸಾಕಾಗುವುದಿಲ್ಲ. ಹೊಸ ಪೀಳಿಗೆ ಬರುವಂತೆ ಮಾಡಬೇಕು. ತಿಂಗಳಲ್ಲಿ ಒಂದೆರಡು ದಿನ ಗ್ರಾಮಕ್ಕೆ ಹೋಗಿ ಸದಸ್ಯತ್ವ ಅಭಿಯಾನ ಮಾಡಬೇಕು.
ಗ್ರಾಮ ಸಮಿತಿಗಳು ಬಲಿಷ್ಠವಾಗಬೇಕು ಮತ್ತು ಅದನ್ನು ಸಕ್ರೀಯಗೊಳಿಸಬೇಕು. ಜಿಲ್ಲೆಯಲ್ಲಿ ಗೌಡ ಸಮಾಜ ಬಲಿಷ್ಠ ಎಂದು ಗುರುತಿಸಿಕೊಳ್ಳುವುದಕ್ಕೆ ಎರಡು ವರ್ಷದ ಹಿಂದೆ ಸ್ವಾಮೀಜಿಯವರ ಮುತುವರ್ಜಿಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಉಪಸ್ಥಿತಿಯಲ್ಲಿ ಜಿಲ್ಲಾ ಗೌಡ ಸಮಾಜ ಅಸ್ತಿತ್ವಕ್ಕೆ ಬಂತು. ಈ ಸಂಘಟನೆ ಮೂಲಕ ಎಲ್ಲಾ ಗೌಡ ಸಮಾಜವನ್ನು ಒಂದಾಗಿ ಸೇರಿಸುವ ಚಿಂತನೆ ನಡೆದಾಗ ಅಲ್ಲಿ 18 ಕುಟುಂಬ ಗೋತ್ರದ ಸಮಸ್ಯೆ ಬಂದಾಗ ಅಪಸ್ವರ ಕೇಳಿ ಬಂತು. ಇದು ಇನ್ನೊಂದು ಸಂಘಕ್ಕೆ ನಾಂದಿಯಾಯಿತು. ಜಿಲ್ಲೆಯಲ್ಲಿ ಎರಡು ಸಮಿತಿಯಾದರೆ ಸಂಘಟನೆ ವಿಂಗಡಣೆಯಾಗುತ್ತೆ ಎಂದು ಹೇಳಿ ಆಗಿದೆ. ಆದರೆ ಈಗ ಎರಡು ಸಂಘಟನೆ ಜಿಲ್ಲೆಯಲ್ಲಿದೆ. ಹಾಗಾಗಿ ಅವರು ಮಾತುಕತೆ ಮಾಡಿ ಒಂದು ಸಂಘ ಮಾಡಲಿ.
ನಾವು ಯಾರ ಪರವೂ ಇಲ್ಲ. ಸಂಘ ಒಬ್ಬ ವ್ಯಕ್ತಿಗಾಗಿ ಅಲ್ಲ. ಇಡೀ ಸಮಾಜಕ್ಕೆ ಸಂಘ ಇರಬೇಕು ಎಂದು ಚಿಂತಿಸಬೇಕು. ನಮ್ಮಲ್ಲಿ ಒಂದೇ ಸಂಘ ಇರಬೇಕು. ಏನಾದರು ವ್ಯತ್ಯಾಸ ಇದ್ದರೆ ಅದನ್ನು ಸರಿದೂಗಿಸಿ. ಸಮಾಜದ ಒಳಿತಿಗಾಗಿ ಸಂಘಟನೆ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಅವರು ಮಾತನಾಡಿ, ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಸದಸ್ಯತ್ವ ತನ್ನಿಂದ ತಾನೇ ಆಗುತ್ತದೆ. ಪ್ರತಿಭಾ ಪುರಸ್ಕಾರ ನಮ್ಮ ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾಡಲಾಗಿದೆ. ವಿದ್ಯಾರ್ಥಿಗಳ ಪೋಷಕರು ಸಂಘದ ಸದಸ್ಯರಾಗುವ ಪ್ರಯತ್ನ ಮಾಡಬೇಕು. ಜೊತೆಗೆ ಗ್ರಾಮ ಸಮಿತಿಗಳ ಮೂಲಕ ಸದಸ್ಯತ್ವಕ್ಕೆ ಹೆಚ್ಚು ಒತ್ತು ನೀಡುವ ಕೆಲಸ ಆಗಬೇಕು. ನಾವು ಅದಕ್ಕೆ ಪೂರ್ಣ ಸಹಕಾರ ನೀಡುತ್ತೇವೆ ಎಂದ ಅವರು ನಮ್ಮಲ್ಲಿ ಸ್ವಸಹಾಯ ಸಂಘವಿದೆ. 1600 ಗುಂಪು ಇದೆ. 10 ಸಾವಿರ ಮಂದಿ ಸದಸ್ಯರಿದ್ದಾರೆ. ಅವರ ಸಹಕಾರ ಬಹಳ ಅಗತ್ಯ ಎಂದರು.
ಸಂಘದ ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಗೌಡ ಅವರು ಮಾತನಾಡಿ, ನಾವು ಸದಸ್ಯತ್ವ ಮಾಡುವಲ್ಲಿ ಹಿಂದೆ ಸರಿದಿದ್ದೀವೆ. ಸದಸ್ಯರಾಗಿದ್ದರೆ ಅವರಿಗೆ ಸಮುದಾಯ ಭವನದ ಬಾಡಿಗೆಯಲ್ಲಿ ರಿಯಾಯಿತಿ ಸಹಿತ ವಿವಿಧ ಸವಲತ್ತು ನೀಡಲಾಗುತ್ತದೆ. ಹಾಗಾಗಿ ತಾಲೂಕು ಮಟ್ಟದಲ್ಲಿ ನಾವು ಸದಸ್ಯತ್ವಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇದಕ್ಕೆ ವಲಯ ಉಸ್ತುವಾರಿಯವರು ಹೆಚ್ಚು ಮುತುವರ್ಜಿ ವಹಿಸಬೇಕು. ನಾವು ಅವರಿಗೆ ಸಹಕಾರ ನೀಡುತ್ತೇವೆ. ಮುಂದಿನ ಮಹಾಸಭೆಗೆ ಕನಿಷ್ಠ 1 ಸಾವಿರ ಹೊಸ ಸದಸ್ಯರ ಸೇರ್ಪಡೆಯಾಗಬೇಕು ಎಂದರು.
ಮಹಿಳಾ ಗೌಡ ಸಂಘದ ಅಧ್ಯಕ್ಷೆ ವಾರಿಜ ಕೆ ಗೌಡ ಅವರು ಮಾತನಾಡಿ, ಮಹಿಳೆಯರ ಒಗ್ಗಟ್ಟು ಭದ್ರಪಡಿಸುವ ಕೆಲಸವಾಗಬೇಕು ಎಂದ ಅವರು ಮಹಿಳಾ ಸಂಘದ ಕಾರ್ಯಚಟುವಟಿಕೆಯನ್ನು ತಿಳಿಸಿದರು. ಯುವ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ ಅವರು ಮಾತನಾಡಿ ಸಂಘದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎಲ್ಲರೂ ಭಾಗಿಯಾಗುವಂತೆ ವಿನಂತಿಸಿದರು.
ಸಮಿತಿಯಲ್ಲಿದ್ದು ವಿವಿಧ ಸಮಾಜಮುಖಿ ಸೇವೆಯಲ್ಲಿ ಸಕ್ರಿಯರಾಗಿರುವ ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್, ಸಂಘದ ಉಪಾಧ್ಯಕ್ಷ ಸುಂದರ ಗೌಡ ನಡುಬೈಲು, ಪಾಲ್ತಾಡಿಯ ಕ್ಯಾ.ಸಂಜೀವ ಗೌಡ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ, ಹಿರಿಯರಾದ ರಾಮಣ್ಣ ಗೌಡ ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಇದೇ ಸಂದರ್ಭ ಮುಖ್ಯಮಂತ್ರಿ ಪದಕ ಪುರಸ್ಕೃತ ಗೃಹರಕ್ಷಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭದ್ರತಾ ಸಿಬ್ಬಂದಿ ಜಗನ್ನಾಥ ಪಿ ಅವರನ್ನು ಸನ್ಮಾನಿಸಲಾಯಿತು. ಲೋಕೇಶ್ ಚಾಕೊಟೆ ಮತ್ತು ಪುರುಷೋತ್ತಮ ಮುಂಗ್ಲಿಮನೆ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ 11 ಮತ್ತು ಪಿಯುಸಿಯಲ್ಲಿ 15 ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು. ಡಾ.ಶ್ರೀಧರ್ ಪಾಣತ್ತಿಲ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ ಕೆ.ಎಸ್ ವಾರ್ಷಿಕ ವರದಿ ಮಂಡಿಸಿದರು. ಸಂಘದ ಲೆಕ್ಕಪತ್ರವನ್ನು ಖಜಾಂಚಿ ಶಿವರಾಮ ಮತಾವು ಮಂಡಿಸಿದರು. ಸಭಾಭವನದ ಉಸ್ತುವಾರಿ ಲಿಂಗಪ್ಪ ಗೌಡ ತೆಂಕಿಲ ಅವರು ಸಭಾಭವನದ ಲೆಕ್ಕಪತ್ರ ಮಂಡಿಸಿದರು. ಉಷಾಮಣಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ರವಿ ಮುಂಗ್ಲಿಮನೆ ಸ್ವಾಗತಿಸಿ, ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ ವಂದಿಸಿದರು. ಸಭಾಭವನದ ವ್ಯವಸ್ಥಾಪಕ ಸುರೇಶ್ ಮೂವಪ್ಪು ಸಹಕರಿಸಿದರು