ಕೊಪ್ಪಳ: ಗಂಗಾವತಿ ನಗರದಲ್ಲಿ ವಿದ್ಯುತ್ ಕಂಬದ ಮೇಲಿರುವ ಧಾರ್ಮಿಕ ಚಿಹ್ನೆ ಅಳವಡಿಕೆ ವಿಷಯ ವಿವಾದಕ್ಕೆ ತಿರುಗಿದೆ. ಈ ಬಗ್ಗೆ ಎಸ್ಡಿಪಿಐ ದೂರು ಆಧರಿಸಿ ತೆರವಿಗೆ ಸೂಚಿಸಿದ್ದ ತಾಲೂಕು ಆಡಳಿತ, ಸದ್ಯ ತೆರವು ಮಾಡದಂತೆ ಸೂಚಿಸಿದ್ದು ಗೊಂದಲ ಹೆಚ್ಚಿಸಲು ಕಾರಣವಾಗಿದೆ.
ಧಾರ್ಮಿಕ ಸೂಕ್ಷ್ಮ ಕೇಂದ್ರ ಗಂಗಾವತಿಗೆ ಮತ್ತೆ ವಿವಾದ ಸುತ್ತಿಕೊಂಡಿದೆ. ರಾಮಾಯಣದ ಆಂಜನೇಯ ಜನಿಸಿದ ಅಂಜನಾದ್ರಿ ಬೆಟ್ಟ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. 100 ಕೋಟಿ ರೂ.ಮೊತ್ತದ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನು ಗಂಗಾವತಿ ನಗರದ ಇಂದಿರಾಗಾಂಧಿ ವೃತ್ತದಿಂದ ಮಹಾರಾಣ ಪ್ರತಾಪ ಸಿಂಗ್ ವೃತ್ತವರೆಗೆ ನಗರಸಭೆ ವಿದ್ಯುತ್ ದೀಪ ಕಂಬ ಅಳವಡಿಸಿದೆ. ಕಂಬದ ಮೇಲೆ ಹಿಂದು ಧಾರ್ಮಿಕ ಚಿಹ್ನೆಗಳಾದ ಗಧೆ, ಬಿಲ್ಲು, ಬಾಣ ಹಾಗೂ ವೆಂಕಟೇಶ್ವರ ಸ್ವಾಮಿ ಚಿಹ್ನೆಗಳನ್ನು ಹಾಕಲಾಗಿದೆ. ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿ ಚಿಹ್ನೆ ಅಳವಡಿಸಿದ್ದು ಇತರರ ಧಾರ್ಮಿಕ ಭಾವನೆಗೆ ಧಕ್ಕೆ ಆಗುತ್ತದೆಂದು ಎಸ್ಡಿಪಿಐ ಖಂಡಿಸಿದೆ. ಕೂಡಲೇ ಕಂಬ ತೆರವು ಮಾಡುವಂತೆ ಆಗ್ರಹಿಸಿದೆ.
ಇದಕ್ಕೆ ಹಿಂದುಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಮನವಿ ಆಧರಿಸಿ ಡಿಸಿ ಮೌಖಿಕ ಆದೇಶದ ಮೇರೆಗೆ ಕಂಬ ತೆರವು ಮಾಡುವಂತೆ ಗಂಗಾವತಿ ತಹಸೀಲ್ದಾರ್ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜತೆಗೆ ಕಾಮಗಾರಿ ನಿರ್ವಹಿಸಿದ ಕೆಆರ್ಐಡಿಎಲ್ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದ್ದಾರೆ. ಅಲ್ಲದೇ ತಮ್ಮ ಆದೇಶ ವಾಪಸ್ ಪಡೆವ ಮೂಲಕ ಮತ್ತೆ ಗೊಂದಲಕಾರಿ ನಡೆ ಅನುಸರಿಸಿದ್ದು ಮತ್ತೊಂದು ವಿವಾದವನ್ನು ತಾಲೂಕಾಡಳಿತವೇ ಹುಟ್ಟುಹಾಕಿದಂತಾಗಿದೆ.
ಹನುಮಂತನ ಜನ್ಮ ಸ್ಥಳವಾದ ಗಂಗಾವತಿಯಲ್ಲಿ ಗದಾ, ಬಿಲ್ಲು ಮತ್ತು ಬಾಣದಂತಹ ಚಿಹ್ನೆಗಳನ್ನು ಒಳಗೊಂಡಿರುವ ವಿದ್ಯುತ್ ಕಂಬಗಳಿಗೆ ಎಸ್‌ಡಿಪಿಐ ಆಕ್ಷೇಪ ಎತ್ತಿದೆ. ಹಿಂದುಗಳ ಆಕ್ರೋಶ ಈ ಚಿಹ್ನೆಗಳು ಸಾಮಾಜಿಕ ಶಾಂತಿಗೆ ಧಕ್ಕೆ ತರುತ್ತವೆ ಎಂದು ಅವರು ಹೇಳುತ್ತಾರೆ. ಗಮನಾರ್ಹ ಸಂಗತಿ ಏನೆಂದರೆ, ಸುಪ್ರೀಂಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸಿ ಧ್ವನಿವರ್ಧಕಗಳ ಮೂಲಕ ಅಜಾನ್ ಪ್ರಸಾರ ಮಾಡಿದಾಗ ಅಂತಹ ಯಾವುದೇ ಆತಂಕಗಳು ಉದ್ಭವಿಸುವುದಿಲ್ಲ ಅಥವಾ ಕೋಮು ಸೌಹಾರ್ದಕ್ಕೆ ಯಾವುದೇ ಅಪಾಯವಿಲ್ಲ. ಅದೇ ರೀತಿ, ಗೋಹತ್ಯೆ ವಿರೋಧಿ ಕಾನೂನು ಮತ್ತು ಹಿಂದುಗಳ ಧಾರ್ಮಿಕ ನಂಬಿಕೆಗಳನ್ನು ಕಡೆಗಣಿಸಿ ಗೋಹತ್ಯೆ ಮಾಡಿದಾಗಲೂ ಯಾವುದೇ ಶಾಂತಿ ಕದಡುವುದಿಲ್ಲ. ಇದೀಗ ವಿದ್ಯುತ್ ಕಂಬಗಳನ್ನು ತೆರವು ಮಾಡಲು ತಹಸೀಲ್ದಾರ್ ಆದೇಶಿಸಿದ್ದು, ಇವುಗಳ ಅಳವಡಿಕೆಗೆ ಕಾರಣರಾದ ಎಂಜಿನಿಯರ್ ವಿರುದ್ಧ ದೂರು ದಾಖಲಿಸಲು ಕೋರಿದ್ದಾರೆ. ನಾವು ಯಾವ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಹಿಂದು ಕಾರ್ಯಕರ್ತ ಗಿರೀಶ್ ಭಾರಧ್ವಜ್ ಎಂಬುವರು ಎಕ್ಸ್ ಖಾತೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಸಾಕಷ್ಟು ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ತಹಸೀಲ್ದಾರ್ ಆದೇಶವನ್ನು ಹಿಂಪಡೆದಿದ್ದಾರೆ.