ಮಂಗಳೂರು: ಸರಕಾರದ ವತಿಯಿಂದ ಮೂಡುಬಿದಿರೆ ಕ್ಷೇತ್ರದ ಪಿಲಿಕುಳದಲ್ಲಿ ಕಂಬಳ ಆಯೋಜನೆಗೆ ನಿರ್ಧರಿಸುವ ಬಗ್ಗೆ ಮಾಹಿತಿಯಿದೆ. ಆದರೆ ಇದರ ಪೂರ್ವಭಾವಿ ಸಭೆ, ಕರೆ ನಿರ್ಮಾಣಕ್ಕೆ ಚಾಲನೆ ಸೇರಿದಂತೆ ಯಾವುದೇ ಸಭೆಗೆ ಸ್ಥಳೀಯ ಶಾಸಕನಾದ ನನ್ನನ್ನು ಆಹ್ವಾನಿಸದೆ ಅಗೌರವ ತೋರಿಸಲಾಗಿದೆ. ಹೀಗಾಗಿ ಜಿಲ್ಲಾಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.ದ. ಕ. ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸರಕಾರಿ ಕಾರ್ಯಕ್ರಮ ನಡೆಯುವುದಾದರೂ ಆ ಕ್ಷೇತ್ರದ ಶಾಸಕ ಅಧ್ಯಕ್ಷತೆ ವಹಿಸಬೇಕಾಗಿರುವುದು ನಿಯಮ. ಅದನ್ನು ಮೀರಿ ಇದೀಗ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ನನಗೆ ಯಾವುದೇ ಮಾಹಿತಿ ನೀಡದೆ ತಯಾರಿ ನಡೆಸಿದ್ದಾರೆ. ಈ ಹಿಂದೆ ಹಲವು ಸಂದರ್ಭ ಇಂತಹದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಾರಾಷ್ಟ್ರೀಯ ಮಟ್ಟದ ಸರ್ಫಿಂಗ್ ನಡೆದಾಗಲೂ ಈ ರೀತಿ ಅಗೌರವ ತೋರಲಾಗಿದೆ. ಕೆಂಜಾರು ಮಳೆ ಹಾನಿ ಸಂದರ್ಭ ಜಿಲ್ಲಾಧಿಕಾರಿ ಸಭೆಗೆ ಕರೆದಿಲ್ಲ. ಹೀಗಾಗಿ ಜಿಲ್ಲಾಧಿಕಾರಿ ವಿರುದ್ದ ಸ್ಪೀಕರ್, ಮುಖ್ಯಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರಿಗೆ ಪತ್ರದ ಮೂಲಕ ದೂರು ನೀಡಲಾಗಿದೆ ಎಂದು ತಿಳಿಸಿದರು.