ತಿರುಪತಿ ತಿಮ್ಮಪ್ಪನ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣ ಮಾಡಿರುವುದು ಪರೀಕ್ಷೆಯಿಂದ ತಿಳಿದು ಬಂದಿದೆ. ಇದು ದೇಶದ್ಯಾಂತ ಭಾರೀ ಸಂಚಲನವನ್ನೇ ಸೃಷ್ಟಿಸಿದ್ದು ಜೊತೆಗೆ ಆಂಧ್ರಪ್ರದೇಶದ ರಾಜಕೀಯದಲ್ಲೂ ಬಿರುಗಾಳಿ ಎಬ್ಬಿಸಿದೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ತಿಮ್ಮಪ್ಪನ ಲಡ್ಡುಗಳನ್ನು ಕಳುಹಿಸಲಾಗಿತ್ತು ಎಂದು ತಿಳಿದು ಬಂದಿದೆ.
2024ರ ಜನವರಿ 22 ರಂದು ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತ್ತು. ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಸೆಲೆಬ್ರಿಟಿಗಳು, ಗಣ್ಯರು, ರಾಜಕೀಯ ನಾಯಕರು, ಸಿನಿ ರಂಗದ ನಟ, ನಟಿಯರು ಹಾಗೂ ಲಕ್ಷಾಂತರ ಭಕ್ತರು ಭಾಗಿಯಾಗಿದ್ದರು. ಸಂಭ್ರಮ ಸಡಗರದಿಂದ ಬಾಲರಾಮನ ವಿಗ್ರಹವನ್ನು ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ಉದ್ಘಾಟನಾ ಸಮಾರಂಭದಲ್ಲಿ ಪ್ರಸಾದವಾಗಿ ವಿಶ್ವವಿಖ್ಯಾತ ತಿರುಪತಿ ಲಡ್ಡುಗಳನ್ನು ವಿತರಿಸಲಾಗಿತ್ತು.
ಸಾವಿರವಲ್ಲ, 10 ಸಾವಿರವಲ್ಲ ಬರೋಬ್ಬರಿ 1 ಲಕ್ಷ ತಿಮ್ಮಪ್ಪನ ಲಡ್ಡುಗಳನ್ನು ತಿರುಪತಿಯಿಂದ ಅಯೋಧ್ಯಗೆ ಕಳುಹಿಸಿಕೊಡಲಾಗಿತ್ತು. ಬಳಿಕ ಜನವರಿ 22 ರಂದು ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ತಿಮ್ಮಪ್ಪನ ಲಡ್ಡುಗಳನ್ನು ಅಲ್ಲಿ ನೆರೆದಿದ್ದ ಸೆಲೆಬ್ರಿಟಿಗಳು, ಗಣ್ಯರು, ರಾಜಕೀಯ ನಾಯಕರು ಸೇರಿದಂತೆ ಭಕ್ತರಿಗೆ ವಿತರಣೆ ಮಾಡಲಾಗಿತ್ತು.
ತಿರುಪತಿ ತಿಮ್ಮಪ್ಪನ ಲಡ್ಡುಗಳನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ದನದ ಕೊಬ್ಬು, ಹಂದಿ ಕೊಬ್ಬು, ಮೀನಿನ ಎಣ್ಣೆ ಬೆರಸಲಾಗಿತ್ತು ಎಂದು ತಿಳಿದು ಬಂದಿದೆ. ಈ ಸಂಬಂಧ ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ಸರ್ಕಾರ ವಿರುದ್ಧ ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದಾರೆ. ಅಲ್ಲದೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಅಸಹ್ಯಕರ ಮತ್ತು ಗೊಂದಲದ ಸೃಷ್ಟಿಸಿರುವುದು ಎಷ್ಟು ಸರಿ. ಭಕ್ತರ ಭಾವನೆಗಳೊಂದಿಗೆ ಈ ರೀತಿ ಆಟವಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಲಾಗುತ್ತಿದೆ.