ತಮ್ಮ ಊರಿಗೆ,ಗ್ರಾಮಕ್ಕೆ, ನಗರಕ್ಕೆ ಸಂಪರ್ಕಿಸುವ ರಸ್ತೆ ನಾದುರಸ್ತಿಯಲ್ಲಿದ್ದಾಗ, ಆ ರಸ್ತೆಯನ್ನು ಆಶ್ರಯಿಸುವ ಜನ ಅಧಿಕಾರಿಗಳ,ಜನಪ್ರತಿನಿಧಿಗಳ ಮೊರೆ ಹೋಗೋದು ಸಾಮಾನ್ಯ. ಹೀಗೆ ಜನಪ್ರತಿನಿಧಿ, ಅಧಿಕಾರಿಗಳಿಗೆ ರಸ್ತೆಯನ್ನು ದುರಸ್ತಿಪಡಿಸುವಂತೆ ಮನವಿ ಮಾಡಿದರೂ, ಆಡಳಿತ ವ್ಯವಸ್ಥೆಯಿಂದ ಕೆಲವೊಮ್ಮೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಜನಸಾಮಾನ್ಯನ ಸಮಸ್ಯೆಗೆ ಆಡಳಿತ ವರ್ಗ ಜಾಣ ಮೌನ ವಹಿಸೋದೂ ಸಾಮಾನ್ಯವೇ. ಈ ಮೌನ ಮುರಿಯಲು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೈಕಂಬದ ಜನ ಮುಂದಾಗಿದ್ದಾರೆ.
ಊರಿನ ರಸ್ತೆಯ ಸಮಸ್ಯೆಗೆ ಪರಿಹಾರ ಕಲ್ಪಿಸಲು ಜನ ಮಾಧ್ಯಮಗಳ ಮೂಲಕ ತಮ್ಮ ಸಮಸ್ಯೆಯನ್ನು ವ್ಯಕ್ತಪಡಿಸೋದೋ ಇದೆ. ಕೆಲವೊಮ್ಮೆ ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದರೆ, ಇನ್ನು ಕೆಲವೊಮ್ಮೆ ವಿಚಿತ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ವ್ಯವಸ್ಥೆಯ ಗಮನಸೆಳೆಯಲು ಪ್ರಯತ್ನಿಸುತ್ತಾರೆ.
ಹೊಂಡ ಬಿದ್ದ ರಸ್ತೆಯ ಹೊಂಡಗಳ ಸುತ್ತ ರಂಗೋಲಿ ಬಿಡೊಸೋದು, ನೀರು ನಿಂತ ಹೊಂಡದಲ್ಲಿ ಈಜಾಡೋದು ಹೀಗೆ ಹಲವು ರೀತಿಯ ವ್ಯಂಗ್ಯಗಳ ಮೂಲಕ ಪ್ರತಿಭಟನೆ ನಡೆಸೋದನ್ನು ಕಂಡಿದ್ದೇವೆ. ಸರಕಾರದ ಗಮನಸೆಳೆಯಲು ಇಂಥಹುದೇ ಒಂದು ಪ್ರತಿಭಟನೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೈಕಂಬ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸಂಪರ್ಕಿಸುವ ರಸ್ತೆಯ ಬಳಕೆದಾರರು ಮಾಡಿದ್ದಾರೆ. ಇವರು ರಸ್ತೆಗಿಳಿದು ಪ್ರತಿಭಟನೆಯನ್ನೋ, ಹೊಂಡದಲ್ಲಿ ಈಜಾಡಿಯೋ ಪ್ರತಿಭಟನೆ ನಡೆಸಿಲ್ಲ. ಬದಲಾಗಿ ಕೇವಲ ಒಂದು ಬ್ಯಾನರ್ ಹಾಕುವ ಮೂಲಕ ಎಲ್ಲರ ಗಮನವನ್ನೂ ಈ ರಸ್ತೆಯ ಮೇಲೆ ಹರಿಸುವಂತೆ ಮಾಡಿದ್ದಾರೆ.
ಸಾರ್ವಜನಿಕರು ಅಳವಡಿಸಿರುವ ಈ ಬ್ಯಾನರ್ ನಲ್ಲಿ ಬರೆದ ಶಬ್ದಗಳು ವಿಚಿತ್ರವಾಗಿದ್ದು, ಎಲ್ಲರ ಗಮನವನ್ನು ಸೆಳೆಯುತ್ತಿದೆ. ಎಚ್ಚರಿಕೆಯ ಫಲಕ ಎಂದು ಒಕ್ಕಣೆ ಬರೆದಿದ್ದಾರೆ. ಯಾರೋ ಕೈಕಂಬದಿಂದ ಕುಕ್ಕೆ ಸುಬ್ರಹ್ಮಣ್ಯದವರೆಗಿನ ರಸ್ತೆಯಲ್ಲಿ ನಿಧಿ ಇರುವ ಬಗ್ಗೆ ರಾಜ್ಯ ಸರಕಾರದ ಗಮನಕ್ಕೆ ತಂದಿದ್ದಾರೆ. ಇದರಿಂದಾಗಿ ಎಚ್ಚೆತ್ತ ರಾಜ್ಯ ಸರಕಾರ ಈ ರಸ್ತೆಯಲ್ಲಿ ನಿಧಿಯನ್ನು ಹುಡುಕುವ ಕಾರಣ ರಸ್ತೆಯ ಮಧ್ಯೆ ಅಲ್ಲಲ್ಲಿ ಹೊಂಡಗಳನ್ನು ತೋಡಿ ಹಾಗೆಯೇ ಬಿಟ್ಟು ಹೋಗಿದೆ ಎಂದು ಬರೆಯಲಾಗಿದೆ.
ದಕ್ಷಿಣಕನ್ನಡ ಹೆಸರಾಂತ ನಾಗಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನು ಸಂಪರ್ಕಿಸುವ ಈ ರಸ್ತೆ ಕಳೆದ ಹಲವು ತಿಂಗಳಿನಿಂದ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯನ್ನು ದುರಸ್ತಿಪಡಿಸಿ, ಭಕ್ತರ ಓಡಾಟಕ್ಕೆ ಅನುವು ಮಾಡಿಕೊಡುವಂತೆ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಕಾರಣ,ಸಾರ್ವಜನಿಕರುವಿದೀಗ ಈ ರೀತಿಯ ಅತ್ಯಂತ ಪ್ರಭಾವಶಾಲಿ ಬ್ಯಾನರ್ ಅಳವಡಿಸುವ ಮೂಲಕ ಸರಕಾರದ ಉದಾಸೀನತಡಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಅತ್ಯಂತ ಶ್ರೀಮಂತ ಕ್ಷೇತ್ರವೂ ಆಗಿದ್ದು, ಪ್ರತೀ ವರ್ಷ 100 ಕೋಟಿ ಆಸುಪಾಸಿನಲ್ಲಿ ಆದಾಯವನ್ನು ಗಳಿಸುವ ಕ್ಷೇತ್ರವೂ ಆಗಿದೆ.