ಬೆಂಗಳೂರು: ಕರ್ನಾಟಕ ಜನತೆಯ ಹಲವು ದಿನಗಳ ಕನಸು ನನಸಾಗಿದೆ. ಬೆಂಗಳೂರಲ್ಲಿ ಅಮೆರಿಕಾ ದೂತಾವಾಸ ಕಚೇರಿ ಉದ್ಘಾಟನೆಯಾಗಿದೆ. ಆದರೆ, ವೀಸಾ ಸೇವೆ ಇನ್ನೂ ವಿಳಂಬವಾಗಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಎಂಬಿ ಪಾಟೀಲ್, ಸಚಿವ ಪ್ರಿಯಾಂಕ್ ಖರ್ಗೆ, ಸಂಸದ ತೇಜಸ್ವಿ ಸೂರ್ಯ, ಸಂಸದ ಡಾ ಮಂಜುನಾಥ್ ಮತ್ತು ಅಮೆರಿಕಾ ರಾಯಭಾರಿ ಅಧಿಕಾರಿಗಳು ಭಾಗಿಯಾಗಿದ್ದರು. ಹಾಗೇ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್ ಷಾ, ಕ್ರಿಸ್ ಗೋಪಾಲಕೃಷ್ಣನ್ ಕೂಡ ಭಾಗವಹಿಸಿದ್ದರು.
ಈಗಾಗಲೇ 12 ದೂತಾವಾಸ ಕಚೇರಿ ಬೆಂಗಳೂರಲ್ಲಿವೆ. ಇನ್ನಷ್ಟು ದೇಶಗಳು ಇಲ್ಲಿ ದೂತವಾಸ ಕಚೇರಿ ತೆರೆಯಬೇಕೆಂದು ನಮ್ಮ ಬಯಕೆ ಇದೆ. ಅಮೆರಿಕ ಮತ್ತು ಭಾರತದ ಬಾಂಧವ್ಯ ವೃದ್ಧಿಗೆ ನಿರಂತರ ಪ್ರಯತ್ನ ನಡೆಯುತ್ತಿದೆ. ಬೆಂಗಳೂರಿಗೆ ಸಾಕಷ್ಟು ಸಾಮರ್ಥ್ಯ ಇದ್ದು ಅದರ ಬಳಕೆಯಾಗಬೇಕು. ಬೆಂಗಳೂರಿನಲ್ಲಿ 1 ವರ್ಷದಲ್ಲಿ 8.80 ಲಕ್ಷ ಪಾಸ್ ಪೋರ್ಟ್ ವಿತರಣೆಯಾಗಿದೆ. ಅಂದರೆ 10 ವರ್ಷ ಅವಧಿಯಲ್ಲಿ ಎಷ್ಟು ಪಾಸ್ ಪೋರ್ಟ್ ವಿತರಣೆಯಾಗಿರಬಹುದು, ಅದರ ಮಹತ್ವ ಅರಿಯಬೇಕು ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದರು.
ಶೀಘ್ರದಲ್ಲೇ ಅಮೆರಿಕಕ್ಕೆ ಭೇಟಿ ನೀಡಲಿದ್ದೇನೆ. ಅಲ್ಲಿನ ಹೊಸ ಸರ್ಕಾರದ ಜೊತೆ ಬೆಂಗಳೂರಿನ ದೂತಾವಾಸ ಕಚೇರಿಯಲ್ಲಿ ವೀಸಾ ನೀಡುವ ಪ್ರಕ್ರಿಯೆ ಆರಂಭಿಸುವ ಕುರಿತಾಗಿ ಚರ್ಚಿಸಲಿದ್ದೇನೆ. ಶೀಘ್ರದಲ್ಲೇ ಬೆಂಗಳೂರಿನ ದೂತಾವಾಸ ಕಚೇರಿಯಲ್ಲಿ ವೀಸಾ ಸೇವೆ ಆರಂಭವಾಗಲಿದೆ ಎಂದು ಭರವಸೆ ನೀಡಿದರು.
ಹೊರ ದೇಶದಲ್ಲಿ 35 ಲಕ್ಷ ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. 50 ಲಕ್ಷ ಭಾರತೀಯ ಕುಟುಂಬಗಳಿವೆ. ಈ ದೂತವಾಸದಿಂದ ಅವರಿಗೆ ವೀಸಾ ಸೇವೆ ಹೆಚ್ಚಿನ ಅನುಕೂಲವಾಗಲಿದೆ. ಈಗ ಬೆಂಗಳೂನಿಂದ ಸ್ಯಾನ್ ಫ್ರಾನ್ಸ್‌ಸಿಸ್ಕೋಗೆ ವಾರದಲ್ಲಿ ಮೂರು ದಿನ ವಿಮಾನ ಸಂಚರಿಸುತ್ತಿದೆ. ಇದರಿಂದ ಅಧ್ಯಯನ, ಶಿಕ್ಷಣ, ತಂತ್ರಜ್ಞಾನ, ರಕ್ಷಣಾ ಕ್ಷೇತ್ರದಲ್ಲಿ ಅಮೆರಿಕಾ-ಬೆಂಗಳೂರಿನ ಸಂಬಂಧ ವೃದ್ಧಿಸಲು ಅನುಕೂಲವಾಗಲಿದೆ ಎಂದರು.
2023ರಲ್ಲಿ ಮೋದಿಯವರು ಬೆಂಗಳೂರು ಕಾನ್ಸುಲೇಟ್ ಆರಂಭದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ನಾನು ಬೆಂಗಳೂರಿಗೆ ಬಂದಾಗಲೆಲ್ಲ ಅಮೆರಿಕಾ ದೂತವಾಸ ಕಚೇರಿ ಯಾವಾಗ ಆರಂಭವಾಗುತ್ತದೆ ಎಂಬ ಪ್ರಶ್ನೆ ಬರುತ್ತಿತ್ತು. ನನಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ ಇದೆ. ನಾನು ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ನನ್ನ ವೃತ್ತಿ ಬದುಕು ಆರಂಭಿಸಿದ್ದೇನೆ. ಹೀಗಾಗಿ ಒಂದು ವಿಶೇಷ ಆಸಕ್ತಿ ಇತ್ತು ಎಂದು ತಿಳಿಸಿದರು.
ಅಮೆರಿಕ ಕಾನ್ಸುಲೆಟ್ ಕಚೇರಿ ಸ್ಥಾಪನೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಐಟಿ-ಬಿಟಿ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಅಮೆರಿಕಾದ ರಾಯಭಾರ ಕಚೇರಿ ಆಗಬೇಕೆಂದು ಎಸ್ಎಂ ಕೃಷ್ಣ ಅವರು ಸಿಎಂ ಆಗಿದ್ದಾಲೇ ಪ್ರಯತ್ನ ನಡೆಸಿದ್ದರು. ಅಂದು ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಭೇಟಿ ಮಾಡಲಾಗಿತ್ತು. ಅಲ್ಲಿಂದ ಪ್ರಯತ್ನ ನಡೆದರೂ ಆಗಿರಲಿಲ್ಲ. ಇದೀಗ ಅನುಷ್ಠಾನವಾಗುತ್ತಿದೆ, ಖುಷಿಯ ವಿಚಾರ. ಬೆಂಗಳೂರು ಜಾಗತಿಕವಾಗಿ ಬೆಳೆದಿದೆ. ಯೋಜನಾ ಬದ್ಧವಾದ ನಗರ ಅಲ್ಲದ ಕಾರಣ ಒಂದಷ್ಟು ಸಮಸ್ಯೆ ಇರಬಹುದು, ಅದನ್ನು ಪರಿಹರಿಸಲು ಪ್ರಯತ್ನ ನಡೆಸಲಾಗಿದೆ ಎಂದರು.