ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕೌನ್ಸಿಲರ್ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಅವರನ್ನು ಹುಬ್ಬಳ್ಳಿಯ ಕಾಲೇಜು ಆವರಣದಲ್ಲಿ ಗುರುವಾರ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಫಯಾಜ್ ಎನ್ನುವ ವ್ಯಕ್ತಿ ಏಕಾಏಕಿ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಯುವತಿಯನ್ನು ಕಾಲೇಜ್ ಸಿಬ್ಬಂದಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆ ತಲುಪುವ ಮುನ್ನ ಯುವತಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದರು.
ಎಲ್ಲಾ ಆಯಾಮಗಳಿಂದ ತನಿಖೆ
ಆರೋಪಿ ಫಯಾಜ್ ತನ್ನೂರಿನತ್ತ ಪರಾರಿಯಾಗಲು ಪ್ರಯತ್ನಿಸಿದ್ದನು. ತಕ್ಷಣ ಆರೋಪಿಯನ್ನು ಬಂಧನ ಮಾಡಲಾಗಿದೆ. ಬಿಸಿಎ ಓದುವಾಗಿನಿಂದಲು ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಆರೋಪಿ ಹೇಳಿದ್ದಾನೆ. ಆದರೆ ಯುವತಿ ಅದನ್ನು ತಿರಸ್ಕಾರ ಮಾಡಿದ್ದಳು. ಈ ಕುರಿತು ಎಲ್ಲ ಆಯಾಮಗಳಿಂದ ತನಿಖೆ ನಡೆಯುತ್ತಿದೆ ಎಂದು ರೇಣುಕಾ ಸುಕುಮಾರ್ ಹೇಳಿದ್ದಾರೆ.
ಆರೋಪಿ ಬೆಳಗಾವಿ ಜಿಲ್ಲೆಯವನು. ಕಾಲೇಜ್ ಆವರಣದಲ್ಲಿ ಕೊಲೆ ನಡೆದಿತ್ತು. ಪ್ರಕರಣ ಖಂಡಿಸಿ ನಡೆಸಿದ ಪ್ರತಿಭಟನೆ ಗಮನಿಸಿದ್ದೇವೆ. ಎಲ್ಲ ಪರಿಸ್ಥಿತಿ ನಿಭಾಯಿಸಲು ಕ್ರಮ ಕೈಗೊಂಡಿದ್ದೇವೆ. ಪೊಲೀಸರು ಎಲ್ಲ ರೀತಿ ಕ್ರಮ ಕೈಗೊಂಡಿದ್ದಾರೆ. ಮುಂದಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಲವ್ ಜಿಹಾದ್ ಆರೋಪಕ್ಕೆ ಪ್ರತಿಕ್ರಿಯೆ
ಲವ್ ಜಿಹಾದ್ ಆರೋಪಕ್ಕೆ ಪ್ರತಿಕ್ರಿಯಿಸಿದ ರೇಣುಕಾ ಸುಕುಮಾರ್, ಮುಂದಿನ ತನಿಖೆ ಬಳಿಕ ಎಲ್ಲವು ಗೊತ್ತಾಗಲಿದೆ. ಯುವತಿಯ ಕುಟುಂಬಸ್ಥರು ನೀಡಿದ ದೂರಿನಂತೆಯೆ ದೂರು ದಾಖಲು ಮಾಡಲಾಗುವುದು. ಈ ಕೊಲೆ ಪ್ರಕರಣ ಕುರಿತು ತನಿಖೆ ಕೈಗೊಂಡಿದ್ದೇವೆ ಎಂದು ಹೇಳಿದರು.
ಪೊಲೀಸ್ ಠಾಣೆ ಎದುರು ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು
ವಿದ್ಯಾನಗರ ಪೊಲೀಸ್ ಠಾಣೆ ಎದುರು ನೂರಾರು ಹಿಂದೂ ಸಂಘಟನೆಗಳ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಆಗ್ರಹಿಸುತ್ತಿದ್ದು, ಇಲ್ಲದಿದ್ದಲ್ಲಿ ತಮ್ಮ ವಶಕ್ಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಡಿಸಿಪಿ ರಾಜೀವ್ ಮತ್ತು ಹಿಂದುಪುರ ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಸಹ ಉಂಟಾಯ್ತು.
ಯಾರು ಈ ಫಯಾಜ್?
ಫಯಾಜ್ ಮೂಲತಃ ಸವದತ್ತಿ ತಾಲೂಕಿನ ಮುನವಳ್ಳಿ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಫಯಾಜ್ (23) ತಂದೆ ತಂದೆ ಬಾಬಾ ಸಾಹೇಬ್, ತಾಯಿ ಮುಮತಾಜ್ ಇಬ್ಬರು ಸರ್ಕಾರಿ ಶಾಲೆಯ ಶಿಕ್ಷಕರು. ಫೇಲ್ ಆಗಿದ್ದರಿಂದ ಕಾಲೇಜ್ ಬಿಟ್ಟಿದ್ದ ಫಯಾಜ್ ಆರು ತಿಂಗಳು ಮನೆಯಲ್ಲಿಯೇ ಇದ್ದನು.
ನಗರದಲ್ಲಿ ಎಬಿವಿಪಿಯಿಂದ ಪ್ರತಿಭಟನೆ
ನೇಹಾ ಹಿರೇಮಠ್ ಹತ್ಯೆ ಖಂಡಿಸಿ ಬಿವಿಬಿ ಕ್ಯಾಂಪಸ್ ನಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನ ಆವರಣದಲ್ಲಿ ಒಂದೆಡೆ ಸೇರಿದ ನೂರಾರು ಎಬಿವಿಪಿ ಕಾರ್ಯಕರ್ತರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯ್ತು.
ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು
ಆರೋಪಿಗೆ ಶಿಕ್ಷೆಯಾಗಬೇಕು. ನೇಹಾ ಬಸ್ನಲ್ಲಿ ಒಬ್ಬಳೇ ಹೋಗಲು ಹೆದರುತ್ತಿದ್ದಳು. ಅಂತಹ ನಮ್ಮ ನೇಹಾಗೆ ಇಂತಹ ಸ್ಥಿತಿ ಬಂದಿದೆ ಅಂದ್ರೆ ನಂಬಲು ಆಗುತ್ತಿಲ್ಲ. ಎಲ್ಲಾ ವಿಷಯವನ್ನು ತಿಳಿದುಕೊಂಡು ನಿಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸಿ ಎಂದು ಕೇಳಿಕೊಳ್ಳುತ್ತೇನೆ. ಇವತ್ತು ನಮ್ಮ ಮಗಳು ಜೀವ ಹೋಗಿದೆ. ಅವನಿಗೆ ಮಾತ್ರ ಕಠಿಣ ಶಿಕ್ಷೆಯನ್ನು ಕೊಡಿಸಬೇಕು ಎಂದು ನೇಹಾ ಪೋಷಕರು ಆಗ್ರಹಿಸಿದ್ದಾರೆ.
ಸಿಎಂಗೆ ಬಿಜೆಪಿ ಪ್ರಶ್ನೆ
ಅರಾಜಕತೆಯೇ ಆಡಳಿತದ ಧ್ಯೇಯ – ಕಾನೂನು ಸುವ್ಯವಸ್ಥೆ ಮಂಗಮಾಯ. ಇದು ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರ. ಸಿಎಂ ಸಿದ್ದರಾಮಯ್ಯ ಅವರೇ, ಇದು ಅರಾಜಕತೆಯ ಹಾಗೂ ಓಲೈಕೆ ಆಡಳಿತದ ಪ್ರತಿಫಲವಾಗಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಹಾಡುಹಗಲೇ ವಿದ್ಯಾರ್ಥಿನಿ ನೇಹಾ ಹಿರೇಮಠ ಮೇಲೆ ಫಯಾಜ್ ಚಾಕು ಇರಿದು ಸಾಯಿಸಿದ್ದಾನೆ. ನಿಮ್ಮ ತುಷ್ಟೀಕರಣದ ಆಡಳಿತಕ್ಕೆ ಇನ್ನೆಷ್ಟು ಅಮಾಯಕ ಹಿಂದೂಗಳನ್ನು ಬಲಿ ಹಾಕುತ್ತೀರಿ ಎಂಬುದಕ್ಕೆ ಉತ್ತರ ನೀಡಿ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.