144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್ರಾಜ್ಗೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಜನವರಿ 13ರಿಂದ ಶುರುವಾದ ಮಹಾಕುಂಭ ಇದೇ ಫೆ.26ರಂದು ಅಂತ್ಯವಾಗಲಿದೆ.
ಸುಮಾರು ಒಂದು ತಿಂಗಳಿಗೂ ಹೆಚ್ಚಿನ ಅವಧಿ ನಡೆಯುವ ಮಹಾಕುಂಭ ಮೇಳಕ್ಕೆ ಬಿಗಿ ಭದ್ರತೆ ಸೇರಿದಂತೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಜಾರಿಗೊಳಿಸಿದೆ. ಇದರ ಮಧ್ಯೆಯೂ ಕೆಲವು ಅವಘಡ, ಅನಾಹುತ ಸಂಭವಿಸಿದ್ದು ಬೇಸರದ ಸಂಗತಿ.
ಊಹೆಗೂ ಮೀರಿ ತ್ರಿವೇಣಿ ಸಂಗಮಕ್ಕೆ ಹರಿದುಬಂದ ಭಕ್ತರ ಸಂಖ್ಯೆಗೆ ಬೆರಗಾದ ಉತ್ತರ ಪ್ರದೇಶ ಆಡಳಿತ ಮಂಡಳಿ, ಭಕ್ತಾಧಿಗಳನ್ನು ನಿಯಂತ್ರಿಸುವಲ್ಲಿ ತೀರ ಪರದಾಡಿದರು. ಇದಕ್ಕೆ ಸಾಕ್ಷಿ ಎನ್ನುವಂತೆ ಕಾಲ್ತುಳಿತ ಘಟನೆ ಸಂಭವಿಸಿತು. ಈ ದುರಂತದಲ್ಲಿ 40 ಮಂದಿ ಸಾವನ್ನಪ್ಪಿದರೆ, 100ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡರು. ಇದೆಲ್ಲದರ ನಡುವೆ ಯಶಸ್ವಿಯಾಗಿ ಸಾಗಿರುವ ಮಹಾಕುಂಭ ಮೇಳ ಇದೀಗ ಮುಕ್ತಾಯದ ಹಂತದಲ್ಲಿದೆ. ಈ ವಿಚಾರವನ್ನು ಉದ್ದೇಶಿಸಿ ಮಾತನಾಡಿರುವ ಸಿಎಂ ಯೋಗಿ, ಮಹಾಕುಂಭಕ್ಕೆ ತಗುಲಿದ ಖರ್ಚು ಮತ್ತು ಲಾಭ ಎಷ್ಟು ಎಂಬುದನ್ನು ಈಗ ಬಹಿರಂಗಪಡಿಸಿದ್ದಾರೆ.
ರಾಜ್ಯದ ವಿರೋಧ ಪಕ್ಷದ ನಾಯಕರು ಸರ್ಕಾರಕ್ಕೆ ಹಲವಾರು ಸವಾಲುಗಳನ್ನು ಒಡ್ಡುತ್ತಿರುವ ಮಧ್ಯೆಯೂ ಇದ್ಯಾವುದಕ್ಕೂ ಕಿವಿಗೊಡದ ಯೋಗಿ ಆದಿತ್ಯನಾಥ್, ‘ಇಡೀ ಪ್ರಪಂಚದ ಗಮನವನ್ನು ಮಹಾಕುಂಭ ಮೇಳ ಸೆಳೆಯುತ್ತಿದೆ. ಕೋಟ್ಯಂತರ ಜನರು ಸೇರುತ್ತಿದ್ದಾರೆ ಮತ್ತು ಈ ಸಂದರ್ಭದಲ್ಲಿ, ಪ್ರಯಾಗ್‌ರಾಜ್, ಕಾಶಿ ಮತ್ತು ಅಯೋಧ್ಯೆಗೂ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ’ ಎಂದು ಹೇಳಿದರು.
‘ಯುವ ಉದ್ಯಮಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಯೋಗಿ ಆದಿತ್ಯನಾಥ್, ‘ಮಹಾಕುಂಭ ಮೇಳವನ್ನು ಟೀಕಿಸುವವರು ಈ ಬೃಹತ್ ಕಾರ್ಯಕ್ರಮವು ರಾಜ್ಯಕ್ಕೆ ಭಾರಿ ಆದಾಯವನ್ನು ತಂದುಕೊಡುತ್ತಿದೆ ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ಮಹಾಕುಂಭಮೇಳ ಆಯೋಜನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 7,500 ಕೋಟಿ ರೂ. ಖರ್ಚು ಮಾಡಿದ್ದು, ಇದರಿಂದಾಗಿ ರಾಜ್ಯಕ್ಕೆ ಮೂರು ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ಬರುವ ನಿರೀಕ್ಷೆಯಿದೆ’ ಎಂದು ಹೇಳಿದರು.
‘ಕುಂಭಮೇಳದ ಸಂದರ್ಭದಲ್ಲಿ ಅಯೋಧ್ಯೆ, ಪ್ರಯಾಗ್‌ರಾಜ್, ಕಾಶಿ, ಚಿತ್ರಕೂಟ, ಗೋರಖ್‌ಪುರ ಮತ್ತು ನೈಮಿಶಾರಣ್ಯಂಗಳಿಗೆ ತೆರಳುತ್ತಿರುವ ಭಕ್ತಾಧಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಒಂದೇ ವರ್ಷದಲ್ಲಿ ಅಯೋಧ್ಯೆಗೆ ಉಡುಗೊರೆ ಮತ್ತು ದೇಣಿಗೆಗಳ ರೂಪದಲ್ಲಿ 700 ಕೋಟಿ ರೂ. ಹಣ ಸಂಗ್ರಹವಾಗಿದೆ. ಫೆಬ್ರವರಿ 17ರ ಹೊತ್ತಿಗೆ ಒಟ್ಟು 54 ಕೋಟಿ, 31 ಲಕ್ಷ ಜನರು ಮಹಾಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಫೆಬ್ರವರಿ 26ರ ಮಹಾಶಿವರಾತ್ರಿ ಹಬ್ಬದವರೆಗೂ ಈ ಪುಣ್ಯ ಸ್ನಾನ ಮುಂದುವರಿಯುತ್ತದೆ’ ಎಂದರು.