ಪುತ್ತೂರು: ಅಪ್ರಾಪ್ತನೋರ್ವ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಘಟನೆ ಪುತ್ತೂರಿಗೆ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಮಾ.12 ರಂದು ನಡೆದಿದೆ.
ಈ ಕುರಿತು ಪುತ್ತೂರು ಬಿಜೆಪಿ ನಿಯೋಗ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಪ್ರಾಪ್ತ ಬಾಲಕನ ವಿರುದ್ಧ ಬಾಲಾಪರಾಧಿ ನೆಲೆಯಲ್ಲಿ ಮತ್ತು ಆತನಿಗೆ ಪ್ರಚೋದನೆ ನೀಡಿದ ಸಂಬಂಧಿಕರಿಬ್ಬರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ತಿಳಿಸಿದ್ದಾರೆ.
ಬೆಳ್ತಂಗಡಿ ಕಡೆಯಿಂದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪುತ್ತೂರು ಕಾಲೇಜಿಗೆ ಬರುತ್ತಿದ್ದ ವಿದ್ಯಾರ್ಥಿನಿಗೆ ಅದೇ ಬಸ್ ನಲ್ಲಿದ್ದ ಪುತ್ತೂರು ಖಾಸಗಿ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೋರ್ವ ಕಿರುಕುಳ ನೀಡಿದ್ದ. ಪುತ್ತೂರು ಬಸ್ ನಿಲ್ದಾಣದಲ್ಲಿ ಬಾಲಕ ಬಸ್ ನಿಂದ ಇಳಿಯುತ್ತಿದ್ದಂತೆ ಆತನನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಈ ವೇಳೆ ವಿಚಾರಿಸಿದಾಗ ಆತ ಗೇರುಕಟ್ಟೆಯ ನಿವಾಸಿ ಎಂದು ಹೇಳಿ ಈ ಕೃತ್ಯ ಮಾಡಲು ನನ್ನ ಚಿಕ್ಕಪ್ಪ ಮತ್ತು ಮಾವ ಪ್ರಚೋದನೆ ನೀಡಿರುವುದಾಗಿ ತಿಳಿಸಿದ್ದಾನೆಂದು ತಿಳಿದು ಬಂದಿದೆ.
ಘಟನೆ ವಿಚಾರ ತಿಳಿದಂತೆ ಬಿಜೆಪಿ ನಿಯೋಗ ಪೊಲೀಸ್ ಠಾಣೆಗೆ ತೆರಳಿ ಬಾಲಕ ಅಪ್ರಾಪ್ತವಾಗಿರುವ ಕಾರಣ ಬಾಲಾಪರಾಧಿ ನೆಲೆಯಲ್ಲಿ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆತನಿಗೆ ಪ್ರಚೋದನೆ ನೀಡಿದ ಚಿಕ್ಕಪ್ಪ ಮತ್ತು ಮಾವನ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಪೊಲೀಸರು ಯಾರ ಒತ್ತಡಕ್ಕೂ ಮಣಿಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾಲಾಪರಾಧಿಗೆ ತಕ್ಕ ಶಿಕ್ಷೆ ವಿಧಿಸದಿದ್ದರೆ ಎಬಿವಿಪಿ ಪ್ರತಿಭಟನೆ ನಡೆಸಲಿದೆ ಎಂದು ಎಬಿವಿಪಿ ವಿಭಾಗದ ಪ್ರಮುಖ್ ಅಮೃತ ಅವರು ತಿಳಿಸಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರು, ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಮುರಳಿಕೃಷ್ಣ ಹಸಂತಡ್ಕ, ಸುನೀಲ್ ಆಳ್ವ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಯುವರಾಜ್ ಪೆರಿಯತ್ತೋಡಿ, ವಿದ್ಯಾಧರ್ ಜೈನ್, ಸುರೇಶ್ ಅತ್ರಮಜಲು, ಅಕ್ಷಯ್ ರಜಪೂತ್, ಹರಿಪ್ರಸಾದ್ ಯಾದವ್, ಡಾ. ಪ್ರಸನ್ನ ತಾ.ಪಂ ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.