ಪುತ್ತೂರು: ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ)ದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅವರನ್ನು ಸರಕಾರ ನೇಮಕಗೊಳಿಸಿದೆ.
ಪುತ್ತೂರು ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ೧೯೬೧ರ ಕಲಂ ೪(ಸಿ)ರ ಉಪಕಲಂ ೩(೧)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಅಮಳ ರಾಮಚಂದ್ರ ಅವರನ್ನು ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಳಿಸಿ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ (ಅಭಿವೃದ್ಧಿ, ಪ್ರಾಧಿಕಾರ ಮತ್ತು ನಗರ ಯೋಜನಾ(ಸೇ) ಲತಾ ಕೆ.ಅವರು ಮಾ.13ರಂದು ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಕೆಪಿಸಿಸಿ ವಕ್ತಾರರಾಗಿರುವ ಅಮಳ ರಾಮಚಂದ್ರ ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಮುಖ ಭಾಷಣಗಾರರೂ ಆಗಿರುವ ಅಮಳ ರಾಮಚಂದ್ರ ಅವರು ಪಕ್ಷದ ಯೋಜನೆ, ಸಿದ್ದಾಂತ, ಕಾರ್ಯಕ್ರಮಗಳನ್ನು ಪ್ರಬಲವಾಗಿ ಸಮರ್ಥಿಸುವ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.
ಮೂಲತ: ಕೊಳ್ತಿಗೆ ಗ್ರಾಮದ ಅಮಳ ನಿವಾಸಿಯಾಗಿದ್ದು ಪ್ರಗತಿಪರ ಕೃಷಿಕರೂ ಆಗಿರುವ ರಾಮಚಂದ್ರ ಅವರು ಪ್ರಸ್ತುತ ಇಲ್ಲಿನ ನೆಲ್ಲಿಕಟ್ಟೆಯಲ್ಲಿ ವಾಸವಾಗಿದ್ದಾರೆ. ಸುಳ್ಯದ ಎನ್‌ಎಂಸಿಯಲ್ಲಿ ಬಿಎಸ್ಸಿ ಪದವಿ ಶಿಕ್ಷಣ ಪಡೆದಿರುವ ಅಮಳ ರಾಮಚಂದ್ರ ಅವರು, ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪಧಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.
ಪದವಿ ಶಿಕ್ಷಣದ ಬಳಿಕ ಕೃಷಿಯೆಡೆಗೆ ಆಸಕ್ತಿ ತೋರಿದ್ದ ಇವರು ಆರಂಭದಲ್ಲಿ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. ಕೊಳ್ತಿಗೆ ಗ್ರಾಮ ಪಂಚಾಯತ್‌ನ ಬಿಜೆಪಿ ಬೆಂಬಲಿತ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಇವರು ಪುತ್ತೂರು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆ ನಿಭಾಯಿಸಿದ್ದರು. ೨೦೦೮ರಲ್ಲಿ ನಡೆದ ವಿಧಾನ ಸಭಾ ಚುನಾವಣೆ ಸಂದರ್ಭ ಶಕುಂತಳಾ ಶೆಟ್ಟಿಯವರಿಗೆ ಬಿಜೆಪಿ ಟಿಕೆಟ್ ನಿರಾಕರಣೆಯಾಗಿ ಅವರು ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪಧಿಸಿದ್ದ ಸಂದರ್ಭ ಸ್ವಾಭಿಮಾನಿ ವೇದಿಕೆ ರಚನೆಯಾಗುವಲ್ಲಿ ಅಮಳ ಅವರು ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ಸ್ವಾಭಿಮಾನಿ ವೇದಿಕೆಯ ಪ್ರಧಾನ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಆ ಬಳಿಕ ಶಕುಂತಳಾ ಟಿ.ಶೆಟ್ಟಿಯವರು ಕಾಂಗ್ರೆಸ್ ಸೇರ್ಪಡೆಗೊಂಡಾಗ ಅವರೊಂದಿಗೆ ಅಮಳ ರಾಮಚಂದ್ರ ಅವರೂ ಕಾಂಗ್ರೆಸ್‌ಗೆ ಸೇರಿದರು. ಕೊಳ್ತಿಗೆ ಗ್ರಾಮೀಣ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಕಾಂಗ್ರೆಸ್ ಸೇವಾ ದಳದ ಸಂಘಟನಾ ಕಾರ್ಯದರ್ಶಿಯಾಗಿ, ಸತತ ಮೂರು ಅವಧಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಎಂ.ಬಿ.ವಿಶ್ವನಾಥ ರೈಯವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರರಾಗಿಯೂ ಕಾರ್ಯನಿರ್ವಹಿಸಿದ್ದರು. ಪುತ್ತೂರಿನ ಬಹುಕಾಲದ ಬೇಡಿಕೆಯಾಗಿರುವ ಮೆಡಿಕಲ್ ಕಾಲೇಜು ಹೋರಾಟ ಸಮಿತಿಯಲ್ಲಿಯೂ ಮುಂಚೂಣಿಯಲ್ಲಿ ಕೆಲಸ ಮಾಡಿದ್ದ ಅಮಳ ಅವರು ಪ್ರಸ್ತುತ ಮಾನವ ಬಂಧುತ್ವ ವೇದಿಕೆಯ ಪುತ್ತೂರು ಘಟಕದ ಪ್ರಧಾನ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೊಳ್ತಿಗೆ ಸೌಹಾರ್ದ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಇವರು ಕಾರ್ಯನಿರ್ವಹಿಸುತ್ತಿದ್ದಾರೆ.