ಜಾತಿ ಆಧಾರಿತ ರಾಜಕೀಯದ ವಿರುದ್ಧ ಗುಡುಗಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ಜಾತಿ, ಧರ್ಮ, ಭಾಷೆ ಅಥವಾ ಲಿಂಗದ ಮೇಲೆ ಯಾರೂ ತಾರತಮ್ಯ ಮಾಡಬಾರದು ಎಂದು ಹೇಳಿದ್ದಾರೆ.
ಶನಿವಾರ ನಾಗ್ಪುರದಲ್ಲಿ ಸೆಂಟ್ರಲ್ ಇಂಡಿಯಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಗಡ್ಕರಿ, “ಜೋ ಕರೇಗಾ ಜಾತ್ ಕಿ ಬಾತ್, ಉಸ್ಕೊ ಕಸ್ಕೆ ಮರುಂಗಾ ಲಾತ್ (ಜಾತಿ ಬಗ್ಗೆ ಮಾತನಾಡುವ ಯಾರೇ ಆದರೂ ನಾನು ಒದೆಯುತ್ತೇನೆ) ಎಂದರು.
ಯಾವುದೇ ವ್ಯಕ್ತಿ ತನ್ನ ಜಾತಿ, ಧರ್ಮ, ಭಾಷೆ ಅಥವಾ ಪಂಥದ ಕಾರಣದಿಂದ ದೊಡ್ಡವನಲ್ಲ ಎಂದು ನಾನು ನಂಬುತ್ತೇನೆ. ಆದರೆ ಗುಣಗಳಿಂದ ಆತ ದೊಡ್ಡವನಾಗುತ್ತಾನೆ. ಹೀಗಾಗಿ ನಾವು ಯಾರನ್ನೂ ಅವರ ಜಾತಿ, ಧರ್ಮ, ಲಿಂಗ ಅಥವಾ ಭಾಷೆಯ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಅವರು ಹೇಳಿದರು.
“ನಾನು ರಾಜಕೀಯದಲ್ಲಿದ್ದು, ಸಾಕಷ್ಟು ಮಾತುಗಳು ಕೇಳಿಬರುತ್ತವೆ. ಆದರೆ ನಾನು ನನ್ನ ದಾರಿಯಲ್ಲಿ ನಡೆಯುತ್ತೇನೆ. ನನಗೆ ಮತ ಹಾಕಲು ಬಯಸುವವರು ಮತ ಹಾಕಬಹುದು ಮತ್ತು ಬಯಸದಿದ್ದರೆ, ಹಾಗೆ ಮಾಡಲು ಅವರು ಸ್ವತಂತ್ರರು.
ನಾನು ನನ್ನ ತತ್ವಗಳೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ಅವುಗಳನ್ನು ಅನುಸರಿಸುತ್ತೇನೆ ಎಂದರು. ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಶಿಕ್ಷಣದ ಮಹತ್ವವನ್ನು ಒತ್ತಿ ಹೇಳಿದ ಗಡ್ಕರಿ, ಹಲವು ವರ್ಷಗಳ ಹಿಂದೆ ತಾವು ಶಾಸಕರಾಗಿದ್ದಾಗ ಸಮುದಾಯದ ಶಿಕ್ಷಣಕ್ಕೆ ಉತ್ತೇಜನ ನೀಡಲು ಮುಸ್ಲಿಂ ಶಿಕ್ಷಣ ಸಂಸ್ಥೆ ಇಂಜಿನಿಯರಿಂಗ್ ಕಾಲೇಜ್ ಆಗಲು ನೆರವು ನೀಡಿದ್ದಾಗಿ ತಿಳಿಸಿದರು.