ಹುಬ್ಬಳ್ಳಿ, : ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು ಇದರ ಬೆನ್ನಲ್ಲೇ ಹಲವಾರು ಸಂಘಟನೆಗಳು ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಪ್ರತಿಭಟನೆ ನಡೆಸಿದ್ದವು. ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಮಹಜರು ನಡೆಸುತ್ತಿರುವಾಗಲೇ ಎನ್ಕೌಂಟರ್ ಮಾಡಿ ಹೊಸಕಿ ಹಾಕಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿ ಆತ ವಾಸವಾಗಿದ್ದ ಮನೆಯ ತಪಾಸಣೆಗೆ ಒಯ್ಯುತ್ತಿರುವಾಗಲೇ ತಪ್ಪಿಸಿಕೊಳ್ಳಲು ಯತ್ನಿಸಿದ್ದಕ್ಕಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಐದು ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ ಬಿಹಾರ ಮೂಲದ ವ್ಯಕ್ತಿಯನ್ನು ಅರೆಸ್ವ್ ಮಾಡಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಸಂಜೆಯ ವೇಳೆಗೆ ಸಿಕ್ಕಿಬಿದ್ದಿದ್ದು ಪೊಲೀಸರ ಮೇಲೆ ಅಟ್ಯಾಕ್ ಮಾಡಿದಾಗ ಪ್ರತಿ ದಾಳಿ ಮಾಡಿದ್ದಾರೆ. ಹೇಯ ಕೃತ್ಯ ಎಸಗಿದ ಆರೋಪಿ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಮಹಿಳಾ ಪಿಎಸ್‌ಐ ಎನ್‌ಕೌಂಟರ್ ಮಾಡಿದ್ದಾರೆ.
ಭಾನುವಾರ ಮಧ್ಯಾಹ್ನ ಬಾಲಕಿ ಅಪಹರಣ, ಕೊಲೆ ಪ್ರಕರಣ ವರದಿಯಾಗುತ್ತಲೇ ಹುಬ್ಬಳ್ಳಿ ವೃತ್ತದ ಅಶೋಕನಗರ ಪೊಲೀಸ್ ಠಾಣೆ, ವಿಜಯನಗರ, ಆದರ್ಶ ನಗರ, ಸಂತೋಷನಗರ, ಮಾಧವನಗರ, ಚಾಮುಂಡೇಶ್ವರಿ ಕಾಲೊನಿ, ದೇವಾಂಗಪೇಟೆ ಹಾಗೂ ಸುತ್ತಮುತ್ತಲಿನ ನಿವಾಸಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ಠಾಣೆ ಎದುರು ಸ್ವಯಂ ಪ್ರೇರಿತವಾಗಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ನಡೆಸುವ ಬದಲು ನಮ್ಮೆದುರಿಗೇ ಗುಂಡು ಹೊಡೆದು ಕೊಲ್ಲಬೇಕು. ನಿಮ್ಮಿಂದ ಆಗದಿದ್ದರೆ, ಅವನನ್ನು ನಮಗೆ ಒಪ್ಪಿಸಿ, ನಾವು ತಕ್ಕ ಶಿಕ್ಷೆ ನೀಡುತ್ತೇವೆ ಎಂದು ಪಟ್ಟು ಹಿಡಿದರು. ಪೊಲೀಸ್ ಕಮಿಷನರ್ ಹಾಗೂ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನಗಳನ್ನು ಮಾಡಿದರೂ ಅವೆಲ್ಲ ವಿಫಲವಾಗಿದ್ದವು.
ಮಹಿಳಾ ಸಂಘಟನೆಗಳ ಸದಸ್ಯರು ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು, ನೂಕುನುಗ್ಗಲು ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಇದೇ ವೇಳೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ ಸ್ಥಳಕ್ಕೆ ಬಂದು, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಮಧ್ಯಾಹ್ನದಿಂದ ಸಂಜೆ ಆರು ಗಂಟೆ ವರೆಗೂ ಪ್ರತಿಭಟನೆ, ಧರಣಿ ಮುಂದುವರಿದಿತ್ತು.
ಇದೀಗ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ಪರಿಹಾರ ನೀಡಲಾಗುವುದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಘೋಷಿಸಿದ್ದಾರೆ.