ಮಂಗಳೂರಿನ ಬಜಪೆಯ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ. ಸುಹಾಸ್ ಶೆಟ್ಟಿ ಕೊಲೆಯಾದ ಕಾರ್ಯಕರ್ತ. ಸುರತ್ಕಲ್‌ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ರಾತ್ರಿ ಹೊಂಚು ಹಾಕಿ ನಾಲ್ವರು ತಲವಾರಿನಿಂದ ಹತ್ಯೆ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇನೋವಾ ಕಾರಿನಲ್ಲಿ ಸಹಚರರ ಜೊತೆ ತೆರಳುತ್ತಿದ್ದ ಸುಹಾಸ್ ಕಾರು ಅಡ್ಡಗಟ್ಟಿ ತಲ್ವಾರ್ಗಳಿಂದ ಹಲ್ಲೆ ಮಾಡಿದ್ದಾರೆ. ಗೂಡ್ಸ್ ವಾಹನ, ಕಾರಿನಲ್ಲಿ ಬಂದು ಸುಹಾಸ್ ಹತ್ಯೆಗೈದಿದ್ದಾರೆ.
ಸುಹಾಸ್ ಶೆಟ್ಟಿಯನ್ನೇ ಟಾರ್ಗೆಟ್ ಮಾಡಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಲಾಗಿದ್ದು, ಆರೋಪಿಗಳ ಪತ್ತೆಗಾಗಿ ತಂಡ ರಚಿಸುತ್ತೇವೆ. ಇನ್ನು ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. ಮಂಗಳೂರು ನಗರದಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗುತ್ತೆ. ಇದು ಪ್ರತೀಕಾರದ ಹತ್ಯೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ತಿಳಿಸಿದರು.
ಸುಹಾಸ್ ಶೆಟ್ಟಿ ಕೊಲೆ ಕೇಸ್ ಸಂಬಂಧ ಒಟ್ಟು 8 ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಎಲ್ಲಾ ಶಂಕಿತ ಆರೋಪಿಗಳ ತೀವ್ರ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ಮಂಗಳೂರಿನಲ್ಲೇ ಅವಿತ್ತಿದ್ದರು ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆಪಡೆಯಲಾಗಿದೆ.