ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ನಲ್ಲಿ ಉಗ್ರರು ಹಿಂದೂಗಳ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಧರ್ಮ ಯಾವುದು ಎಂದು ಕೇಳಿ ಗುಂಡು ಹಾರಿಸಿ ಹಿಂದೂ ಮಹಿಳೆಯರ ಕುಂಕುಮವನ್ನು ಅಳಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತದ ಸೇನೆ ಪಾಕಿಸ್ತಾನದ 9 ಕಡೆ ಉಗ್ರರ ನೆಲೆಗಳ ಮೇಲೆ ವಾಯು ದಾಳಿ ನಡೆಸಿದ್ದುಈ ದಾಳಿಗೆ ಸಿಂಧೂರ ಎಂದು ಹೆಸರಿಡಲಾಗಿದೆ. ಇದು ನಮ್ಮವರನ್ನು ಹೊಡೆದು ಅವರ ಕುಂಕುಮ ಅಳಿಸಿದವರ ಮೇಲೆ ತೀರಿಸಿಕೊಂಡ ಪ್ರತಿಕಾರವಾಗಿದೆ.
ಭಾರತದಲ್ಲಿ ಹೆಣ್ಣನ್ನು ದೇವಿ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಅಂತವರ ಮುತ್ತೈದೆ ಭಾಗ್ಯವನ್ನು ಕಿತ್ತುಕೊಂಡಿದ್ದು ಸಾಮಾನ್ಯ ವಿಷಯವಲ್ಲ. ನಮ್ಮ ಇತಿಹಾಸ ಪುಟ ತಿರುವಿ ನೋಡಿದರೂ ಕೂಡ ಹೆಣ್ಣಿನ ಕಣ್ಣೀರಿನ ಮುಂದೆ ಯಾರೂ ಗೆದ್ದಿಲ್ಲ. ಹೆಣ್ಣಿನ ಶಕ್ತಿಯೇ ಅಂತದ್ದು. ಅದರಲ್ಲಿ ಅವರ ಸೌಭಾಗ್ಯವನ್ನು ಅವರ ಮುಂದೆಯೇ ಕಿತ್ತುಕೊಂಡವರನ್ನು ಬಿಟ್ಟಿತೇ?
ಭಾರತೀಯ ನಾರಿಗೆ ಸಿಂಧೂರ ಅಥವಾ ಕುಂಕುಮ ಕೇವಲ ನೆತ್ತಿಯ ಮೇಲೆ ಅಥವಾ ಹಣೆ ಮೇಲಿಡುವ ಬಣ್ಣವಲ್ಲ. ಅದು ಆಕೆಯ ಶಕ್ತಿ. ಮದುವೆಯ ಸಮಯದಲ್ಲಿ ಇಟ್ಟ ಸಿಂಧೂರ ಕೊನೆಯವರೆಗೂ ಅವಳೊಂದಿಗೆ ಇರಬೇಕು ಎಂಬುದು ಪದ್ಧತಿ. ಇದರಿಂದ ಮಹಿಳೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಕೂಡ ಲಭಿಸುತ್ತದೆ. ಆದರೆ ಇದೆಲ್ಲದರ ಹೊರತಾಗಿ ಸಿಂಧೂರ ಸ್ತ್ರೀ ಶಕ್ತಿಯ ಸಂಕೇತ. ಬೆಂಕಿ, ರಕ್ತ ಮತ್ತು ಶಕ್ತಿಯ ಬಣ್ಣ, ಆಕೆಯನ್ನು ಶಕ್ತಿ ಸ್ವರೂಪಿಯಾಗಿ ಗೌರವಿಸಬೇಕು ಎಂಬುದರ ಸಂಕೇತ. ಅವಳನ್ನು ಕೆಣಕಿದರೆ ತನ್ನ ತಾಯ್ನಾಡನ್ನು ರಕ್ಷಿಸಲು ಬೆಂಕಿಯ ಕಿಡಿಯಾಗಬಹುದು ಅಥವಾ ಮೃದುವಾದ ಹೂವು ಆಗಬಹುದು.
ಇನ್ನು, ನಮ್ಮ ಹಿಂದೂ ಪುರಾಣಗಳಲ್ಲಿ, ಸಿಂಧೂರವು ಅಗಾಧವಾದ ಸಂಕೇತಗಳನ್ನು ಹೊಂದಿದೆ. ದಂತಕಥೆಗಳ ಪ್ರಕಾರ, ಶಿವನ ಪತ್ನಿ ಪಾರ್ವತಿ, ಕೃಷ್ಣನ ಪತ್ನಿ ರುಕ್ಮಿಣಿ, ರಾಮನ ಪತ್ನಿ ಸೀತೆ ಹೀಗೆ ಮುತ್ತೈದೆಯರು ತಮ್ಮ ಹಣೆಯ ಮೇಲೆ ಯಾವಾಗಲೂ ಸಿಂಧೂರವಿಡುತ್ತಿದ್ದರು ಎಂಬ ನಂಬಿಕೆ ಇದೆ. ಈ ಕ್ರಮ ಗಂಡನ ಆಯುಷ್ಯ, ಆರೋಗ್ಯವನ್ನು ಹೆಚ್ಚಿಸುವುದರ ಸಂಕೇತವಾಗಿದೆ. ಇದರಿಂದ ದೀರ್ಘ ಮತ್ತು ಆನಂದದಾಯಕ ವೈವಾಹಿಕ ಜೀವನ ಸಿಗುತ್ತದೆ. ಜೊತೆಗೆ ದಂಪತಿಗಳಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂಬುದರ ಪ್ರತೀಕವಾಗಿದೆ.
ಸೀತೆಯನ್ನು ಅಪಹರಿಸಿದ ರಾವಣನಿಗೆ, ದ್ರೌಪದಿಯ ಸೀರೆ ಎಳೆದ ದುಶ್ಯಾಸನಿಗೆ ಕ್ಷಣಿಕ ಜಯ ಸಿಕ್ಕರೂ ಸಹ ಊಹೆಗೂ ನಿಲುಕದ ಸೋಲು ಪ್ರಾಪ್ತವಾಗಿತ್ತು. ಇದೇ ರೀತಿ ಕಲಿಯುಗದಲ್ಲಿಯೂ ಹೆಣ್ಣಿಗೆ ಅನ್ಯಾಯವಾಗಿದೆ. ಹಿಂದೆ ಹೆಣ್ಣಿಗೆ ಅವಮಾನ ಮಾಡಿಯೇ ಉಳಿದಿಲ್ಲ ಎಂದ ಮೇಲೆ ಹೆಣ್ಣಿನ ಸೌಭಾಗ್ಯವನ್ನೇ ಕಿತ್ತುಕೊಂದವರು ಉಳಿದಾರೆಯೇ?…























