ಪುತ್ತೂರು: ಬೊಳುವಾರಿನಿಂದ ಉಪ್ಪಿನಂಗಡಿ ತೆರಳುವ ರಸ್ತೆಯ ಪಕ್ಕದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಿಸಿದ ಜಾಗದಲ್ಲಿ ನಡೆದ ಅತಿಕ್ರಮಣವನ್ನು ತೆರವುಗೊಳಿಸಿ ಕುಕ್ಕೆ ದೇಗುಲದ ವತಿಯಿಂದಲೇ ಈ ಜಾಗವನ್ನು ಸಮಗ್ರ ಅಭಿವೃದ್ಧಿಗೊಳಿಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಪುತ್ತೂರು ಶಾಸಕರ ಕಚೇರಿಯಲ್ಲಿ ಜೂ. 16ರಂದು ನಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಜಂಟಿ ಸಭೆಯಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ದೇವಸ್ಥಾನದ ಜಾಗ ದೇವಸ್ಥಾನಕ್ಕೆ ಸಿಗಬೇಕು. ಅದು ಯಾವುದೇ ರೀತಿಯಲ್ಲಿ ಅತಿಕ್ರಮಣಕ್ಕೆ ತುತ್ತಾಗಬಾರದು ಎಂಬ ನೆಲೆಯಲ್ಲಿ ಈಗಾಗಲೇ ಶಾಸಕ ಅಶೋಕ್ ರೈ ಅವರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗ ಅತಿಕ್ರಮಣ ತೆರವಿಗೆ ಅನೇಕ ಕ್ರಮಗಳನ್ನು ಕೈಗೊಂಡಿದ್ದು, ಇದರ ಮುಂದುವರಿದ ಭಾಗವಾಗಿ ಕುಕ್ಕೆ ಕ್ಷೇತ್ರದ ಸಮಿತಿಯ ಸಭೆಯನ್ನು ನಡೆಸಿದರು.
ಕುಕ್ಕೆ ದೇವಳಕ್ಕೆ ಸೇರಿದ 1.57 ಎಕರೆ ಜಮೀನು ಬೊಳುವಾರಿನಲ್ಲಿ ಪುತ್ತೂರು- ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಇದರಲ್ಲಿ ಸುಮಾರು 60 ಸೆಂಟ್ಸ್‌ನಷ್ಟು ಜಾಗ ಖಾಸಗಿಯವರಿಂದ ಅತಿಕ್ರಮಣಕ್ಕೆ ತುತ್ತಾಗಿದೆ ಎಂಬ ಅಂಶವನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸರಕಾರದ ಸುತ್ತೋಲೆ ಪ್ರಕಾರ ಮುಜರಾಯಿ ಇಲಾಖೆಯಡಿ ಬರುವ ದೇವಸ್ಥಾನಗಳ ಜಾಗ ಅತಿಕ್ರಮಣವಾಗಿದ್ದರೆ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಜಮೀನು ಅತಿಕ್ರಮಣ ಮಾಡಿಕೊಂಡಿರುವ ಕುಟುಂಬಗಳನ್ನು ತೆರವು ಮಾಡಬೇಕಾಗಿದೆ. ಮಾನವೀಯ ನೆಲೆಯಲ್ಲಿ ಈ ಕುಟುಂಬಗಳಿಗೆ ಪರಿಹಾರ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುವುದು. ತೆರವು ಸಂಬಂಧ ಸಮಗ್ರ ಸಾಧ್ಯತಾ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ತೆರವು ಪೂರ್ಣಗೊಂಡ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದಲೇ ಈ ಜಾಗದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಸಕರು ಎರಡೂ ದೇವಳಗಳ ವ್ಯವಸ್ಥಾಪನಾ ಸಮಿತಿಗೆ ಅನೇಕ ಸಲಹೆ, ಸೂಚನೆ ನೀಡಿದರು. ಸರಕಾರದ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯದ ವಿಚಾರದಲ್ಲಿ ತಾನು ಸಮನ್ವಯ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.
ಪುತ್ತೂರು ಮತ್ತು ಸುಬ್ರಹ್ಮಣ್ಯ ದೇವಳಗಳ ಅಧ್ಯಕ್ಷರು ಜಂಟಿಯಾಗಿ ಅತಿಕ್ರಮಿತ ಜಾಗ ಪರಿಶೀಲಿಸಿ, ಅತಿಕ್ರಮಣದಾರರ ಜತೆ ಸಮಾಲೋಚನೆ ನಡೆಸಲು ನಿರ್ಧರಿಸಲಾಯಿತು.
ಕುಕ್ಕೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಸದಸ್ಯರಾದ ಡಾ.ರಘು, ಅಶೋಕ್ ನೆಕ್ರಾಜೆ, ಅಜಿತ್ ಪೂಜಾರಿ ಪಾಲೇರಿ, ಲೀಲಾ ಮನಮೋಹನ್, ಪ್ರವೀಣ್ ರೈ, ಸೌಮ್ಯ ಭರತ್, ಕಾರ್ಯನಿರ್ವಹಣಾ ಅಽಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ವಿನಯ ಸುವರ್ಣ, ಈಶ್ವರ ಬೇಡೇಕರ್, ನಳಿನಿ ಶೆಟ್ಟಿ, ದಿನೇಶ್ ಕುಲಾಲ್ ಪಿ.ವಿ.,ಮಹಾಬಲ ರೈ, ಸುಬಾಸ್ ರೈ, ಕೃಷ್ಣವೇಣಿ ,ಕುಕ್ಕೆ ಕ್ಷೇತ್ರದ ಮಾಸ್ಟರ್ ಪ್ಲ್ಯಾನ್ ಸಮತಿಯ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ. ಮತ್ತಿತರರು ಉಪಸ್ಥಿತರಿದ್ದರು.