ಧರ್ಮಸ್ಥಳ ಚಲೋ’ ಹಮ್ಮಿಕೊಂಡಿದ್ದ ಬಿಜೆಪಿ ಕೊನೆಯ ಕ್ಷಣದಲ್ಲಿ ಹತ್ಯೆಗೀಡಾಗಿದ್ದ ಸೌಜನ್ಯ ನಿವಾಸಕ್ಕೆ ಭೇಟಿ ಕಾರ್ಯಕ್ರಮ ನಿಗದಿಪಡಿಸಿತ್ತು. ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಾತುಕತೆ ಮಾಡಿ ಸೌಜನ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವುದಾದರೆ ಅಗತ್ಯ ಕಾನೂನು ನೆರವು ನೀಡುವ ಭರವಸೆಯನ್ನೂ ನೀಡಿ ಬಂದಿದ್ದರು. ಆದರೆ, ಸೌಜನ್ಯ ನಿವಾಸಕ್ಕೆ ಭೇಟಿ ನೀಡಿದ್ದು ಈಗ ಬಿಜೆಪಿಯೊಳಗೇ ಆಕ್ಷೇಪಕ್ಕೆ ಕಾರಣವಾಗಿದೆ.
ಕೊನೆಯ ಕ್ಷಣದಲ್ಲಿ ಸೌಜನ್ಯ ನಿವಾಸಕ್ಕೆ ಭೇಟಿ ನಿಗದಿಪಡಿಸಿದ ವಿಜಯೇಂದ್ರ.
ಭೇಟಿಗೆ 15 ನಿಮಿಷಗಳ ಮೊದಲು ನಾಯಕರಿಗೆ ಮಾಹಿತಿ ರವಾನೆ.
ಸಮಾವೇಶ ಮುಗಿಸಿ ಧರ್ಮಸ್ಥಳದಿಂದ ಶಿಕಾರಿಪುರಕ್ಕೆ ನಿಗದಿಯಾಗಿದ್ದ ವಿಜಯೇಂದ್ರ ಟೂರ್ ಪ್ಲಾನ್
ಕೊನೆಯ ಕ್ಷಣದಲ್ಲಿ ಸೌಜನ್ಯ ನಿವಾಸಕ್ಕೆ ಭೇಟಿ ನಿಗದಿ. ಉಳಿದ ನಾಯಕರಿಗೆ ಮಾಹಿತಿ ಹೋಗುವ ವೇಳೆ ಅವರೆಲ್ಲ ಧರ್ಮಸ್ಥಳದಿಂದ ಬೆಂಗಳೂರು ಹಾದಿ ಹಿಡಿದಾಗಿತ್ತು.
ಮಾಹಿತಿ ಬರುವ ವೇಳೆ ಪ್ರಹ್ಲಾದ್ ಜೋಶಿ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ವಿ. ಸುನೀಲ್ ಕುಮಾರ್, ಡಿ.ವಿ. ಸದಾನಂದ ಗೌಡ ಬೆಂಗಳೂರಿನತ್ತ ಹೊರಟಿದ್ದರು.
ನಳೀನ್ ಕುಮಾರ್ ಕಟೀಲ್ ಮಂಗಳೂರಿನತ್ತ ಹೊರಟಿದ್ದರು. ಹೀಗಾಗಿ ಬಿಜೆಪಿಯ ಇತರ ನಾಯಕರು ವಿಜಯೇಂದ್ರ ಜೊತೆ ಸೌಜನ್ಯ ನಿವಾಸಕ್ಕೆ ತೆರಳಿರಲಿಲ್ಲ.
ಪಕ್ಷದಲ್ಲಿ ಮೊದಲೇ ಚರ್ಚೆ ನಡೆಸದೇ ಏಕಾಏಕಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಿರ್ಧಾರ ತೆಗೆದುಕೊಂಡರು ಎಂಬ ಅಸಮಾಧಾನದೊಂದಿಗೇ ಬಿಜೆಪಿ ನಾಯಕರು ಧರ್ಮಸ್ಥಳದಿಂದ ಬೆಂಗಳೂರಿಗೆ ವಾಪಸಾಗಿದ್ದರೆ, ಧಾರ್ಮಿಕ ಕೇಂದ್ರದ ಪರವಾಗಿ ಸಮಾವೇಶ ನಡೆಸಿ ನಂತರ ಸೌಜನ್ಯ ನಿವಾಸಕ್ಕೆ ಭೇಟಿ ನೀಡಬೇಕಾದ ಅವಶ್ಯಕತೆ ಏನಿತ್ತು ಎಂಬ ಆಕ್ಷೇಪವನ್ನೂ ಆಂತರಿಕವಾಗಿ ಕೆಲವು ಮಂದಿ ಬಿಜೆಪಿ ನಾಯಕರು ಎತ್ತಿದ್ದಾರೆ.
ಇನ್ನೊಂದೆಡೆ, ಸಮಾವೇಶದಲ್ಲಿ ಕರಾವಳಿ ಮೂಲದ ಬಿಜೆಪಿ ನಾಯಕರಿಗೇ ಭಾಷಣಕ್ಕೆ ಅವಕಾಶ ದೊರೆಯದ ವಿಚಾರ ಗಮನ ಸೆಳೆದಿದೆ. ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಶಾಸಕ ಸುನೀಲ್ ಕುಮಾರ್ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಮೂಲದ ನಾಯಕರು ವೇದಿಕೆ ಮೇಲೆ ಕುಳಿತು ಎದ್ದು ಹೋಗುವುದಕ್ಕಷ್ಟೇ ಸೀಮಿತವಾದರು. ಅದರಲ್ಲೂ ವಿಧಾನಸಭೆಯಲ್ಲಿ ಧರ್ಮಸ್ಥಳ ಪ್ರಕರಣವನ್ನು ಪ್ರಸ್ತಾಪಿಸಿದ್ದ ಶಾಸಕ ಸುನೀಲ್ ಕುಮಾರ್ಗೂ ಭಾಷಣಕ್ಕೆ ಅವಕಾಶ ನೀಡದಿರುವುದು ಗಮನಾರ್ಹವಾಗಿದೆ. ಆದರೆ ಇದಕ್ಕೆ ಸಮಯಾವಕಾಶದ ಕೊರತೆ ಎಂಬ ಸಮಜಾಯಿಷಿಯನ್ನೂ ಬಿಜೆಪಿ ಕೊಟ್ಟುಕೊಂಡಿದೆ.
ಧರ್ಮಸ್ಥಳಕ್ಕೆ ಹೋಗಿ ಬಂದಿರುವ ಬಿಜೆಪಿ ನಾಯಕರನ್ನು ಈಗ ಆಡಳಿತ ಪಕ್ಷ ಕಾಂಗ್ರೆಸ್ ಪ್ರಶ್ನಿಸಲಾರಂಭಿಸಿದೆ. ಇಷ್ಟು ಹುರುಪಿನಿಂದ ಬಿಜೆಪಿ ಧರ್ಮಸ್ಥಳ ಚಲೋ ನಡೆಸಿರುವುದಕ್ಕೆ ಹಣ ಎಲ್ಲಿಂದ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದರೆ, ಎಸ್ಐಟಿ ತನಿಖೆ ಬಿಟ್ಟು ಎನ್ಐಎಗೆ ಪ್ರಕರಣ ಹಸ್ತಾಂತರ ಮಾಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸೌಜನ್ಯ ಪ್ರಕರಣದ ಬಗ್ಗೆ ಕಾರ್ಕಳ ಶಾಸಕರಿಗೆ ಎಲ್ಲವೂ ಗೊತ್ತಿದ್ದು, ಬಿಜೆಪಿಯವರ ಬಳಿ ದಾಖಲೆ ಇದೆ ಎಂದು ನಳಿನ್ ಕುಮಾರ್ ಕಟೀಲ್ ಅವರೇ ಹೇಳಿದ್ದು, ದಾಖಲೆ ಕೊಟ್ಟು ಬಿಜೆಪಿಯವರು ಸೌಜನ್ಯ ಸಾವಿಗೆ ನ್ಯಾಯ ಕೊಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಒಟ್ಟಾರೆಯಾಗಿ ಧರ್ಮಸ್ಥಳ ಪ್ರಕರಣವನ್ನು ಎನ್ಐಎಗೆ ಒಪ್ಪಿಸಬೇಕೆಂಬ ವಿಪಕ್ಷ ಬಿಜೆಪಿ ಆಗ್ರಹಕ್ಕೆ ರಾಜ್ಯ ಸರ್ಕಾರ ಸೊಪ್ಪು ಹಾಕಿಲ್ಲ. ಇದರ ಮಧ್ಯೆ ಸೌಜನ್ಯ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಕೊಟ್ಟಿದ್ದು, ಪಕ್ಷದ ನಡೆ ಸಕಾಲಿಕ ಎಂದು ಬಿಜೆಪಿ ಹೇಳಿಕೊಳ್ಳುತ್ತಿದೆ. ಆದರೆ ಇದು ಬಿಜೆಪಿ ಯಾರ ಪರ ಎಂದು ಕಾಂಗ್ರೆಸ್ ಪ್ರಶ್ನೆ ಎತ್ತುವಂತೆ ಮಾಡಿದೆ. ಇದರ ಜೊತೆಗೆ ಸ್ವಪಕ್ಷೀಯರೇ ವಿಜಯೇಂದ್ರ ನಿರ್ಧಾರದ ಬಗ್ಗೆ ಆಕ್ಷೇಪ ಎತ್ತುವಂತಾಗಿದೆ.