ಪುತ್ತೂರು: ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟುಗಟ್ಟಿಗೊಳಿಸಿ ಕಾರ್ಯಕರ್ತರಿಗೆ ಹುರಿದುಂಬಿಸುವ ನಿಟ್ಟಿನಲ್ಲಿ ಪಕ್ಷದ ಪ್ರಮುಖ ಸಭೆಗಳು, ಮಾಸಿಕ ಸಭೆಗಳು ಇನ್ನು ಗ್ರಾಮೀಣ ಭಾಗದ ಕಾರ್ಯಕರ್ತರ ಮನೆಯಲ್ಲೇ ನಡೆಯಲಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಅವರ ಮನೆಯಲ್ಲಿ ನಡೆದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳವಾಗಿದ್ದಾರೆ, ಕಾರ್ಯಕರ್ತರಿಲ್ಲದಿದ್ದರೆ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ, ತಳಮಟ್ಟದ ಕಾರ್ಯಕರ್ತ ಪಕ್ಷದ ಬೆನ್ನೆಲುಬಾಗಿದ್ದಾರೆ ಅವರಿಗೆ ಬೆಂಬಲ ನೀಡುವ ಕೆಲಸ ನಾಯಕರಿಂದ ಆಗಬೇಕು. ಕಾರ್ಯಕರ್ತರ ಸೇರಿದಂತೆ ಬಡ ಜನರ ಸೇವೆಗೆ ನಾವು ಸದಾ ಸಿದ್ದರಾಗಿರಬೇಕು. ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಅನೇಕ ಮಂದಿ ಪಕ್ಷದತ್ತ ಒಲವು ತೋರುತ್ತಿದ್ದಾರೆ ಅವರನ್ನು ಮತವಾಗಿ ಬದಲಾಯಿಸುವ ಶಕ್ತಿ ಕಾರ್ಯಕರ್ತನಿಗಿರಬೇಕು ಎಂದು ಹೇಳಿದ ಶಾಕರು ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮದಲ್ಲಿ ಕಾರ್ಯಕರ್ತರ ಮನೆಯಲ್ಲೇ ಸಭೆ ಸಮಾರಂಭಗಳನ್ನು ಆಯೋಜನೆ ಮಾಡಲಾಗುವುದು ಎಂದು ಹೇಳಿದರು.
ಕಾರ್ಯಕರ್ತರ ಬೇಡಿಕೆ ಈಡೇರಿಸುವೆ
ಕಾರ್ಯಕರ್ತ, ಬೂತ್, ವಲಯ ಸಮಿತಿ ಪದಾಧಿಕಾರಿಗಳು ಅಭಿವೃದ್ದಿಯ ಬೇಡಿಕೆ ಇಟ್ಟಲ್ಲಿ ಅದನ್ನು ಈಡೇರಿಸುವ ಕೆಲಸವನ್ನು ಮಾಡುತ್ತೇನೆ. ಯಾವುದೇ ಪಕ್ಷ ಬೇದವಿಲ್ಲದೆ ನಮ್ಮ ಕಾರ್ಯಕರ್ತರು ಜನರ ಸೇವೆಗೆ ಮುಂದಾಗಬೇಕು. ಪಕ್ಷಕ್ಕೆ ಹೊಸ ಕಾರ್ಯಕರ್ತರನ್ನು ದಾಖಲಿಸಿಕೊಳ್ಳುವ ಕೆಲಸ ಮಾಡಬೇಕು. ತಳಮಟ್ಟದಲ್ಲಿ ಪಕ್ಷವನ್ನು ಈಗಲೇ ಗಟ್ಟಿ ಮಾಡುವ ಮೂಲಕ ಮುಂದೆ ಬರುವ ಗ್ರಾಪಂ , ತಾಪಂ ಹಾಗೂ ಜಿಪಂ ಚುನಾವಣೆಗೆ ಯಾರಿಗೇ ಆಗಲಿ ಟಿಕೆಟ್ ಸಿಕ್ಕಿದಲ್ಲಿ ಅವರು ನಮ್ಮವ ಎಂಬ ಭಾವನೆಯಿಂದ ಕೆಲಸ ಮಾಡಿ ಗೆಲ್ಲಿಸಬೇಕು ಎಂದು ಶಾಸಕರು ಮನವಿ ಮಾಡಿದರು.
ಶಾಸಕರ ಒಳ್ಳೆಯ ನಿರ್ಧಾರವಾಗಿದೆ; ಕೆ ಪಿ ಆಳ್ವ
ಕಾರ್ಯಕರ್ತರ ಮನೆಯಲ್ಲಿ ಸಭೆ ನಡೆಸುವ ಮೂಲಕ ಪಕ್ಷದ ಬೆಳವಣಿಗೆಗೆ ತಳಮಟ್ಟದಲ್ಲಿ ಕಾರ್ಯಪೃವೃತ್ತರಾಗಬೇಕು ಎಂಬ ಶಾಸಕ ಅಶೋಕ್ ರೈ ಅವರ ನಿರ್ಧಾರ ಅತ್ಯುತ್ತಮವಾಗಿದೆ. ಮುಂದೆ ಪ್ರತೀ ಗ್ರಾಮದಲ್ಲಿಯೂ ಬ್ಲಾಕ್ ಸಭೆಯು ನಡೆಯಲಿದೆ. ವಲಯ ಹಾಗೂ ಬೂತ್ ಮಟ್ಟದ ಸಭೆಯು ಕಾರ್ಯಕರ್ತರ ಮನೆಯಲ್ಲೇ ನಡೆಯಲಿದೆ. ಶಾಸಕರ ಅಭಿವೃದ್ದಿ ಕಾರ್ಯವನ್ನು ಮೆಚ್ಚಿ ಅನೇಕ ಮಂದಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಇದು ನಮಗೆ ಹುಮ್ಮಸ್ಸನ್ನು ವೃದ್ದಿಸಿದೆ ಎಂದು ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಹೇಳಿದರು.
ಶಾಸಕರ ಸೂಚನೆಯಂತೆ ಪಕ್ಷ ಕಟ್ಟುತ್ತೇವೆ: ನಿಹಾಲ್ ಪಿ ಶೆಟ್ಟಿ
ಒಳಮೊಗ್ರು ವಲಯ ಕಾಂಗ್ರೆಸ್ ಉಸ್ತುವಾರಿ , ಪುಡಾ ಸದಸ್ಯರೂ ಆದ ನಿಹಾಲ್ ಪಿ ಶೆಟ್ಟಿ ಮಾತನಾಡಿ ಒಳಮೊಗ್ರು ಗ್ರಾಮದಲ್ಲಿ ಕಾಂಗ್ರೆಸ್ ಭದ್ರವಾಗಿದೆ. ಪಕ್ಷಕ್ಕೆ ಅನೇಕ ಮಂದಿ ಸೇರ್ಪಡೆಯಾಗುತ್ತಿದ್ದಾರೆ. ಮುಂದಿನ ಗ್ರಾಪಂ ಚುನಾವಣೆ ವೇಳೆ ಇನ್ನಷ್ಟು ಮಂದಿ ಅನ್ಯ ಪಕ್ಷದ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದು ಶಾಸಕರ ಸೂಚನೆಯಂತೆ ನಾವು ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡಲಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಸೇರ್ಪಡೆ
ಇದೇ ಸಂದರ್ಭದಲ್ಲಿ ಸುಮಾರು ೧೩ ಮಂದಿ ಬಿಜೆಪಿ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆಯಾದರು.ಬಾಲಪ್ಪ ನಾಯ್ಕ ಮುಡಾಲಮೂಲೆ, ಕೊರಗಪ್ಪ ನಾಯ್ಕ, ದೇವಪ್ಪ ನಾಯ್ಕ,ಶಿವಪ್ಪ ನಾಯ್ಕ, ಜಯಂತಿ , ಜಯಂತಿ ದೇವಪ್ಪ ನಾಯ್ಕ,ವೇದಾವತಿಶಿವಪ್ಪ ನಾಯ್ಕ, ಜಯ, ದನಂಜಯ, ದಿನೇಶ್, ದಯಾನಂದ ಹಾಗೂ ವಿಶ್ವನಾಥ ಕುಲಾಲ್ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕರು ಪಕ್ಷದ ದ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಕಾಂಗ್ರೆಸ್ ಬಡವರ ಪರ: ಕಾವು ಹೇಮನಾಥ ಶೆಟ್ಟಿ
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಪ್ರತೀ ಕುಟುಂಬಕ್ಕೂ ನೆರವಾಗಿದೆ. ಶಾಸಕ ಅಶೋಕ್ ರೈ ಅವರ ಅಭಿವೃದ್ದಿ ಕೆಲಸವನ್ನು ಜನ ಸ್ವೀಕರಿಸಿದ್ದಾರೆ. ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿಯಿಂದ ತತ್ತರಿಸಿ ಹೋಗಿದ್ದ ಜನ ಸಾಮಾನ್ಯನಿಗೆ ಕರ್ನಾಟಕದ ಕಾಂಗ್ರೆಸ್ ಸರಕರದ ಪಂಚ ಗ್ಯಾರಂಟಿ ಯೋಜನೆ ಆಧಾರ ಸ್ತಂಬವಾಗಿ ನಿಂತಿದೆ. ಮುಂದಿನ ಬಾರಿಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಮ್ತತು ಅಶೋಕ್ ರೈ ಅವರೇ ಮುಂದಿನ ೧೫ ವರ್ಷಗಳ ಕಾಲ ಶಾಸಕರಾಗಿಯೇ ಇರಲಿದ್ದಾರೆ ಎಂದು ಹೇಳಿದರು.
ಸ್ವಇಚ್ಚೆಯಿಂದ ಪಕ್ಷಕ್ಕೆ ಸೇರ್ಪಡೆ: ಅಶೋಕ್ ಪೂಜಾರಿ
ಸಭೆಯಲ್ಲಿ ಸುಮಾರು ೧೩ ಮಂದಿ ಬಿಜೆಪಿ ಕಾರ್ಯಕರ್ತರು ಸ್ವ ಇಚ್ಚೆಯಿಂದ , ಶಾಸಕರ ಅಭಿವೃದ್ದಿ ಕೆಲಸವನ್ನು ಮೆಚ್ಚಿ ಕಾಂಗ್ರೆಸ್ ಸೇರಿದ್ದಾರೆ ಅವರನ್ನು ಮುಂದಿನ ದಿನಗಳಲ್ಲಿ ಪಕ್ಷದ ಕಾರ್ಯಚಟುವಟಿಕೆಯಲ್ಲಿ ಬಳಸಿಕೊಳ್ಳಲಾಗುವುದು. ಪ್ರತೀಯೊಬ್ಬ ಕಾರ್ಯಕತನೂ ಪಕ್ಷದ ಆಸ್ತಿಯಾಗಿದ್ದು, ಒಳಮೊಗ್ರು ಗ್ರಾಮದಲ್ಲಿ ಕಾಂಗ್ರೆಸ್‌ನ ಗತ ವೈಭವ ಮರಳಿ ಬರಲಿದೆ. ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನರ ಮನಸ್ಸನ್ನು ತಟ್ಟಿದೆ ಎಂದು ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಹೇಳಿದರು.
ಕಾರ್ಯಕ್ರಮದಲ್ಲಿ ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಪುತ್ತೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಕಾಂಗ್ರೆಸ್ ಮುಖಂಡರಾದ ಶಶಿಕಿರಣ್ ರೈ ನೂಜಿಬೈಲು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ನೂರುದ್ದೀನ್ ಸಾಲ್ಮರ, ಗ್ರಾಪಂ ಸದಸ್ಯರಾದ ಚಿತ್ರಾ, ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಸುಂದರಿ, ಮಹಮ್ಮದ್ ಬೊಳ್ಳಾಡಿ, ಇಸುಬು ಅಡ್ಕ, ರಶೀದ್, ನಾಸಿರ್ ಯು ಕೆ, ಬೂತ್ ಅಧ್ಯಕ್ಷ ಚೆನ್ನ, ಅಝೀಝ್, ಮುನೀರ್, ಮಹಮ್ಮದ್ ಅಡ್ಕ, ಹಂಝ ಮೊದಲಾದವರು ಇದ್ದರು.