ಬೆಂಗಳೂರಿನಲ್ಲಿ ನಡೆದ ದುಲೀಪ್ ಟ್ರೋಫಿಯ ) ಫೈನಲ್‌ನಲ್ಲಿ ಸೆಂಟ್ರಲ್ ಝೋನ್ ಅದ್ಭುತ ಪ್ರದರ್ಶನ ನೀಡಿ ದಕ್ಷಿಣ ವಲಯ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿ ದುಲೀಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಗೆಲ್ಲಲು ಕೇವಲ 65 ರನ್‌ಗಳ ಗುರಿ ಪಡೆದಿದ್ದ ಕೇಂದ್ರ ವಲಯ 4 ವಿಕೆಟ್‌ಗಳಿಂದ ಕಳೆದುಕೊಂಡು ಪಂದ್ಯದ ಕೊನೆಯ ದಿನದಂದು ಜಯದ ನಗೆಬೀರಿತು. ಕೇಂದ್ರ ವಲಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಯಶ್ ರಾಥೋಡ್ 194 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಇತ್ತ ರಜತ್ ಪಟಿದಾರ್ ಮತ್ತೊಮ್ಮೆ ತಮ್ಮ ನಾಯಕತ್ವದ ಶಕ್ತಿಯನ್ನು ತೋರಿಸಿದ್ದಾರೆ. ವಾಸ್ತವವಾಗಿ ಈ ಹಿಂದೆ ಅವರ ನಾಯಕತ್ವದಲ್ಲಿ RCB ತಂಡ ಐಪಿಎಲ್ ಟ್ರೋಫಿಯನ್ನು ಗೆದ್ದಿತ್ತು. ಇದೀಗ ಅವರು ದುಲೀಪ್ ಟ್ರೋಫಿಯಲ್ಲಿ ತಂಡವನ್ನು ಚಾಂಪಿಯನ್ ಮಾಡಿದ್ದಾರೆ.
ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆದ ಈ ಪೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ವಲಯ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 149 ರನ್‌ಗಳಿಗೆ ಆಲೌಟ್ ಆಯಿತು. ಕೇಂದ್ರ ವಲಯ ಪರ ಬೌಲಿಂಗ್ನಲ್ಲಿ ಮಿಂಚಿದ ಸ್ಪಿನ್ನರ್ ಸರಾಂಶ್ ಜೈನ್ 5 ವಿಕೆಟ್‌ಗಳನ್ನು ಪಡೆದರೆ, ಕುಮಾರ್ ಕಾರ್ತಿಕೇಯ 4 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಮೊದಲ ದಿನವೇ ಸೆಂಟ್ರಲ್ ಝೋನ್‌ನ ಗೆಲುವನ್ನು ಖಚಿತಪಡಿಸಿಕೊಂಡರು. ಇದರ ನಂತರ, ಸೆಂಟ್ರಲ್ ಝೋನ್‌ನ ಬ್ಯಾಟ್ಸ್‌ಮನ್‌ಗಳು ತಮ್ಮ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 511 ರನ್‌ಗಳಿಗೆ ಕೊಂಡೊಯ್ದರು. ನಾಯಕ ರಜತ್ ಪಟಿದಾರ್ ಅದ್ಭುತ 101 ರನ್ ಗಳಿಸಿದರೆ, ಯಶ್ ರಾಥೋಡ್ 194 ರನ್ ಬಾರಿಸಿದರು. ಉಳಿದಂತೆ ಸರಾಂಶ್ ಜೈನ್ 69 ರನ್, ದಾನಿಶ್ ಮಾಲೆವಾರ್ 53 ರನ್‌ಗಳ ಇನ್ನಿಂಗ್ಸ್ ಆಡಿದರು.
ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಪುನರಾಗಮನಕ್ಕಾಗಿ ಹೋರಾಟ ನೀಡಿದ ದಕ್ಷಿಣ ವಲಯ 426 ರನ್ ಕಲೆಹಾಕಿತು. ತಂಡದ ಪರ ಅಂಕಿತ್ ಶರ್ಮಾ 99 ರನ್ ಬಾರಿಸಿದರೆ, ಆಂಡ್ರೆ ಸಿದ್ಧಾರ್ಥ್ 84 ರನ್ ಬಾರಿಸಿದರು.
ಫೈನಲ್ ಪಂದ್ಯದಲ್ಲಿ ದ್ವಿಶತಕ ತಪ್ಪಿಸಿಕೊಂಡ ಯಶ್ ರಾಥೋಡ್ ಅವರನ್ನು ಪಂದ್ಯಶ್ರೇಷ್ಠರಾಗಿ ಆಯ್ಕೆ ಮಾಡಿದರೆ, ಕೇಂದ್ರ ವಲಯದ ಆಲ್‌ರೌಂಡರ್ ಸರಾಂಶ್ ಜೈನ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಟೂರ್ನಿಯಲ್ಲಿ ಸರಾಂಶ್ ಜೈನ್ 136 ರನ್ ಗಳಿಸಿ 16 ವಿಕೆಟ್‌ಗಳನ್ನು ಕಬಳಿಸಿದರು. ನಾಯಕ ರಜತ್ ಪಟಿದಾರ್ ಕೂಡ ಪಂದ್ಯಾವಳಿಯಲ್ಲಿ ಪ್ರಾಬಲ್ಯ ಸಾಧಿಸಿ ಆಡಿದ 3 ಪಂದ್ಯಗಳಲ್ಲಿ 76 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 382 ರನ್ ಗಳಿಸಿದರು. ಹಾಗೆಯೇ ಯಶ್ ರಾಥೋಡ್ ಟೂರ್ನಿಯಲ್ಲಿ 124 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 374 ರನ್ ಗಳಿಸಿದರು. ಡ್ಯಾನಿಶ್ ಮಾಲೆವಾರ್ ಕೂಡ 3 ಪಂದ್ಯಗಳಲ್ಲಿ 70 ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 352 ರನ್ ಗಳಿಸಿದರು.