ಮಂಗಳೂರು, ಸೆಪ್ಟೆಂಬರ್ 16: ಧರ್ಮಸ್ಥಳ ಆಸುಪಾಸಿನಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಧರ್ಮಸ್ಥಳದಲ್ಲಿ ಶವ ಹೂತ ಜಾಗ ಗುರುತಿಸಲು ಹಾಗೂ ಉತ್ಖನನ ನಡೆಸುವಂತೆ ಇಬ್ಬರು ಸ್ಥಳೀಯರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ನ್ಯಾಯಮೂರ್ತಿ ನಾಗಪ್ರಸನ್ನ ಪೀಠ ರಿಟ್ ಅರ್ಜಿಯನ್ನು ಕೈಗೆತ್ತಿಕೊಂಡು ಎಸ್ಐಟಿಗೆ ನೊಟೀಸ್ ಜಾರಿ ಮಾಡಿದೆ. ಸ್ಥಳೀಯರಾದ ಪುರಂದರ ಗೌಡ ಹಾಗೂ ತುಕಾರಾಮ್ ಗೌಡ ಎಂಬ ಇಬ್ಬರು ಸಾಕ್ಷಿದಾರರು, ನೇತ್ರಾವತಿ ಕಾಡಿನಲ್ಲಿ ಚಿನ್ನಯ್ಯ ಶವವನ್ನು ಹೂಳುವಾಗ ನೋಡಿದ್ದೇವೆ ಎಂದು ಎಸ್‌ಐಟಿಗೆ ದೂರು ನೀಡಿದ್ದರು. ಆದರೆ, ಆ ದೂರನ್ನು ಎಸ್ಐಟಿ ಪರಿಶೀಲನೆ ನಡೆಸದ ಹಿನ್ನೆಲೆಯಲ್ಲಿ ಇಬ್ಬರೂ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸರ್ಕಾರದ ಪರ ವಿಶೇಷ ಅಭಿಯೋಜಕ ಬಿ.ಎನ್. ಜಗದೀಶ್ ಹೈಕೋರ್ಟ್ ನೊಟೀಸ್ ಸ್ವೀಕರಿಸಿದ್ದು, ಗುರುವಾರ ಕೋರ್ಟ್‌ಗೆ ಉತ್ತರ ಸಲ್ಲಿಸುವ ಸಾಧ್ಯತೆ ಇದೆ.
ತಕ್ಷಣ ಸ್ಥಳ ಗುರುತು ಮಾಡಿ ಉತ್ಖನನ ನಡೆಸುವಂತೆ ಅರ್ಜಿದಾರರು ಕೋರಿದ್ದಾರೆ. ಅಲ್ಲದೇ, ಕೋರ್ಟ್ ಕಮಿಷನರ್ ಅಥವಾ ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ತನಿಖೆ ನಡೆಯಲಿ ಹಾಗೂ ತನಿಖೆಯ ಪ್ರತೀ ಹಂತದ ಮಾಹಿತಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ವಿಚಾರಣೆ ಗುರುವಾರ ನಡೆಯಲಿದೆ.