ನಾನಾ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ, ಜಾಮೀನಿನ ಮೇಲೆ ಬಿಡುಗಡೆಗೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿರುವ ಕ್ರಿಮಿನಲ್ಗಳನ್ನು ಮಟ್ಟಹಾಕುವ ಉದ್ದೇಶದಿಂದ ನಗರ ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಳೆ ಆರೋಪಿಗಳ ಬೆನ್ನು ಬೀಳುವ ಮೂಲಕ ಮಾಸ್ಟರ್ ಸ್ಟೋಕ್ ನೀಡಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಸುಮಾರು 110ಕ್ಕೂ ಅಧಿಕ ಹಳೆ ಆರೋಪಿಗಳನ್ನು ಬಂಧಿಸಲಾಗಿದೆ.
ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಬಂಧಿತರಾಗಿ ಜಾಮೀನು ಪಡೆದ ಬಳಿಕ ವಿದೇಶಕ್ಕೆ ಪರಾರಿಯಾಗುವುದು, ತಲೆಮರೆಸಿಕೊಳ್ಳುವುದು ನಡೆಯುತ್ತಿತ್ತು. ನ್ಯಾಯಾಲಯ ಪದೇಪದೆ ಬಂಧನ ವಾರಂಟ್ ನೀಡುತ್ತಿದ್ದರೂ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುತ್ತಿರಲಿಲ್ಲ. ಈ ಆರೋಪಿಗಳು ಬೇರೆ ಕ್ರಿಮಿನಲ್ ಕೃತ್ಯದಲ್ಲೂ ಭಾಗಿಯಾಗುತ್ತಿರುವುದು ಬಯಲಾಗುತ್ತಿತ್ತು. ಇದು ಉಳಿದವರಿಗೂ ಕ್ರಿಮಿನಲ್ ಕೃತ್ಯಕ್ಕೆ ಪ್ರೇರಣೆಯಾಗುತ್ತಿತ್ತು.
ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದ ಆರೋಪಿಗಳ ಜಾಮೀನಿಗೆ ನಕಲಿ ಆಧಾರ್ ಕಾರ್ಡ್, ನಕಲಿ ಆರ್ಟಿಸಿ ದಾಖಲೆ ಸೃಷ್ಟಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ನಗರ ಪೊಲೀಸರು ಒಟ್ಟು 12 ಮಂದಿಯನ್ನು ಬಂಧಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಆರೋಪಿಗಳು ಒಬ್ಬ ಆರೋಪಿಯ ಜಾಮೀನಿಗೆ 50 ಸಾವಿರದಿಂದ 1 ಲಕ್ಷ ರೂ.ವರೆಗೂ ಪಡೆಯುತ್ತಿದ್ದರು. ಈ ಜಾಲದ ಹಿಂದೆ ಮತ್ತಷ್ಟು ಮಂದಿ ಭಾಗಿಯಾಗಿದ್ದು ಅವರಿಗೆ ಶೋಧ ಮುಂದುವರಿದಿದೆ. ಇದರಿಂದ ನಿರಂತರ ಕೃತ್ಯದಲ್ಲಿ ತೊಡಗಿಕೊಳ್ಳುವ ಜಾಮೀನು ಪಡೆದುಕೊಳ್ಳಲು ಆರೋಪಿಗಳಿಗೆ ಸಮಸ್ಯೆಯಾಗಿದೆ.
ಹಳೆ ಕಡತಗಳನ್ನು ಕೆದಕಲು ಆರಂಭಿಸಿದ ಪೊಲೀಸ್ ಕಮಿಷನರ್ ಆಯಾ ಠಾಣಾ ಇನ್ಸ್ಪೆಕ್ಟರ್ಗಳಿಗೆ ಹಳೆ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳ ಮಾಹಿತಿ ಕಲೆ ಹಾಕಲು ಟಾಸ್ಕ್ ನೀಡಿದ್ದರು. ಅದರ ಬೆನ್ನುಬಿದ್ದ ಪೊಲೀಸ್ ಅಧಿಕಾರಿಗಳು ಮೂರು ತಿಂಗಳಿನಿಂದ 75ಕ್ಕೂ ಅಧಿಕ ಹಳೆ ಆರೋಪಿಗಳನ್ನು ಬಂಧಿಸಿದ್ದಾರೆ ತಲೆಮರೆಸಿಕೊಂಡ ಆರೋಪಿಗಳ ಎದೆಯಲ್ಲಿ ಢವ ಢವ ಆರಂಭವಾಗಿದೆ.
- ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿ, ವಿದೇಶಕ್ಕೆ ಪರಾರಿಯಾಗಿದ್ದ ವಿಶಾಲ್ ಕುಮಾರ್ ದುಬೈಯಿಂದ ಆಗಮಿಸುತ್ತಿದ್ದ ವೇಳೆ ಸೆ. 4ರಂದು ಮಂಗಳೂರು ಏರ್ಪೋರ್ಟ್ಲ್ಲಿ ಬಂಧನ.
- ವಿಟ್ಲ ಪೊಲೀಸರಿಂದ 19 ವರ್ಷಗಳಿಂದ ತಲೆಮರೆಸಿಕೊಂಡ ದೇವರಾಜ್ ಬಂಧನ.
- 7 ವರ್ಷಗಳಿಂದ ತಲೆಮರೆಸಿಕೊಂಡ ರವೀಂದ್ರ ಎಂಬಾತನ ಸೆರೆ.
- 26 ವರ್ಷ ಹಿಂದೆ ಕೋಮುಗಲಭೆಯಲ್ಲಿ ಭಾಗಿಯಾಗಿದ್ದ ಲೀಲಾಧರ್ ಮತ್ತು ಚಂದ್ರಹಾಸ್ ಕೇಶವ ಶೆಟ್ಟಿ ಸೆರೆ.
- 12 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಇಮ್ರಾನ್ ಖಾನ್ ಸೆರೆ.
- ರೌಡಿಶೀಟರ್ ನಜೀಮ್ ಯಾನೆ ನಜ್ಜು ಬಂಧನ.
- 55 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಚಂದ್ರನ್ ಎಂಬಾತನನ್ನು ಬಂಧಿಸಿದ ಪುತ್ತೂರು ಪೊಲೀಸರು.
- 9 ಬಾರಿ ವಾರಂಟ್ ಹೊರಡಿಸಿಯೂ ವಿಚಾರಣೆಗೆ ಬರದಿದ್ದ ಆರೋಪಿ ಅಬ್ದುಲ್ ಹನೀಫ್ ಬಂಧನ.
- 10 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಅಸಾಮಿ ತಮ್ಮಯ್ಯನನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು.
- ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ಶ್ರೀನಿವಾಸ ಶೆಟ್ಟಿ ಬಂಧನ
- 12 ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಅಲ್ತಾಫ್ ಸೆರೆ
- ವಿನಾಯಕ ಬಾಳಿಗ ಕೊಲೆ ಪ್ರಕರಣದ ಆರೋಪಿ ಶಿವಪ್ರಸಾದ್ ಸೆರೆ
ಕೆಲವೊಂದು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು ಜಾಮೀನು ಪಡೆದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಅನೇಕ ವರ್ಷದಿಂದ ವಿದೇಶದಲ್ಲಿ ಅಥವಾ ಇನ್ಯಾವುದೇ ಸ್ಥಳದಲ್ಲಿ ತಲೆಮರೆಸಿಕೊಂಡಿರುತ್ತಾರೆ. ಇವರಲ್ಲಿ ಕೆಲವರು ಜಿಲ್ಲೆಯಲ್ಲಿ ನಡೆಯುತ್ತಿರುವ ದುಷ್ಕೃತ್ಯಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಹಳೆ ಕ್ರಿಮಿನಲ್ ಪ್ರಕರಣಗಳು ಹಾಗೂ ತಲೆಮರೆಸಿಕೊಂಡವರ ಬಗ್ಗೆ ಮಾಹಿತಿ ಕಲೆ ಹಾಕಿ ಬಂಧಿಸಲಾಗುತ್ತಿದೆ. ಈ ಮೂಲಕ ಉಳಿದ ಕ್ರಿಮಿನಲ್ ಗಳಿಗೆ ಎಚ್ಚರಿಕೆಯ ಪಾಠವಾಗಿದೆ ಮಂಗಳೂರು ನಗರ ಪೊಲೀಸ್ ಆಯುಕ್ತ – ಸುಧೀರ್ ಕುಮಾರ್ ರೆಡ್ಡಿ