ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆಂದು ತೆರಳಿದ್ದ ಮಾಜಿ ಸಚಿವ ಹಾಗೂ ಹಾಲಿ ಶಾಸಕರೂ ಆಗಿರುವ ಬೈರತಿ ಬಸವರಾಜು ಅವರ ಫಾರ್ಚೂನರ್ ಕಾರು ಪಲ್ಟಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿದೇ ಕಾರಿನಲ್ಲಿದ್ದವರು ಪಾರಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಬಳಿ ಮಾಜಿ ಸಚಿವ ಬೈರತಿ ಬಸವರಾಜ ಅವರ ಪಾರ್ಚ್ಯೂನರ್ ಕಾರು ಪಲ್ಟಿಯಾಗಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಶಾಸಕರ ಗನ್ ಮ್ಯಾನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಬಿಜೆಪಿ ಅಭ್ಯರ್ಥಿ ರಾಜುಗೌಡ ಪರ ಮತಯಾಚನೆಗೆ ಆಗಮಿಸಿದ ವೇಳೆ ಘಟನೆ ಸಂಭವಿಸಿದೆ. ಆದರೆ, ಅದೃಷ್ಟವಶಾತ್ ಶಾಸಕ ಬೈರತಿ ಬಸವರಾಜು ಅವರು ಬೇರೆ ಕಾರಿನಲ್ಲಿ ತೆರಳಿದ್ದರಿಂದ ಅವರಿಗೆ ಯಾವುದೇ ಪ್ರಾಣಾಪಾಯ ಅಥವಾ ಗಾಯವಾಗಲೀ ಸಂಭವಿಸಿಲ್ಲ.
ಇನ್ನು ಘಟನೆ ನಡೆದ ಸ್ಥಳಕ್ಕೆ ಹುಣಸಗಿ ಪೊಲೀಸ್ ಠಾಣೆಯ ಪಿಎಸ್‌ಐ ಸಂಗೀತಾ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆಯಲ್ಲಿ ಮಾಜಿ ಸಚಿವರಿಗೆ ಯಾವುದೇ ಹಾನಿಯಾಗದ ಹಿನ್ನೆಲೆಯಲ್ಲಿ ವಾತಾವರಣ ಶಾಂತಿಯುವಾಗಿದೆ. ಅಪಘಾತ ಸ್ಥಳದಲ್ಲಿ ಹೆಚ್ಚಿನ ಜನರು ಸೇರುವ ಮುನ್ನವೇ ರಸ್ತೆಯನ್ನು ಕ್ಲಿಯರ್ ಮಾಡಿಸಿದ ಪೊಲೀಸ್ ಸಿಬ್ಬಂದಿ, ನಂತರ ಕಾರನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿಸಿ, ತೆಗೆದುಕೊಂಡು ಹೋಗಿದ್ದಾರೆ.