ಉಪ್ಪಿನಂಗಡಿ: ದೇವಾಲಯದಲ್ಲಿ ಜಾತಕ ನೋಡಿ ವಾಮಾಚಾರ ತೆಗೆಯುವ ನೆಪದಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದಡಿ ಅರ್ಚಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ತುರ್ಕುಜೆಯಲ್ಲಿ ನಡೆದಿದೆ.
ನರ್ಸಿಂಗ್ ಶಿಕ್ಷಣ ಪಡೆಯುತ್ತಿರುವ ಶಿರಸಿ ಮೂಲದ ಯುವತಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ, ಮನೆಯವರು ದೇವಸ್ಥಾನವೊಂದರಲ್ಲಿ ಹಾಲು–ಪಾಯಸದ ಸೇವೆ ಮಾಡುವ ಸಂಕಲ್ಪ ಮಾಡಿಕೊಂಡು ಯುವತಿಯೊಂದಿಗೆ ದೇವಾಲಯಕ್ಕೆ ತೆರಳಿದ್ದರು. ಈ ವೇಳೆ ಅರ್ಚಕನು ಯುವತಿಯ ಜಾತಕ ಪರಿಶೀಲಿಸಿ “ವಾಮಾಚಾರ ಮಾಡಲಾಗಿದೆ, ಅದನ್ನು ತೆಗೆಯಬೇಕು” ಎಂದು ಹೇಳಿ ಅಗತ್ಯ ವಸ್ತುಗಳನ್ನು ತರಲು ಕುಟುಂಬಕ್ಕೆ ಸೂಚಿಸಿದ್ದಾನೆ. ಮನೆಯವರು ಅವುಗಳನ್ನು ತಂದುಕೊಟ್ಟ ಬಳಿಕ ವಾಮಾಚಾರ ತೆಗೆಯುವ ಪೂಜೆ ನಡೆಸಿದ್ದಾನೆ ಎನ್ನಲಾಗಿದೆ.
ಆ ಬಳಿಕ ಅರ್ಚಕನು ಯುವತಿಯ ಮನೆಯವರಿಗೆ, “ನಾನು ನಿಮ್ಮ ಮಗಳನ್ನು ಇಷ್ಟಪಟ್ಟಿದ್ದೇನೆ, ನನಗೆ ಮದುವೆ ಮಾಡಿಕೊಡಬೇಕು” ಎಂದು ಹೇಳಿದ್ದಾನೆ. ಇದಕ್ಕೆ ಕುಟುಂಬದವರು ನಾವು ಬಿಲ್ಲವ ಸಮುದಾಯದವರು, ನೀವು ಬ್ರಾಹ್ಮಣರಾಗಿರುವುದರಿಂದ ಈ ಮದುವೆ ಸಾಧ್ಯವಿಲ್ಲ ಎಂದು ನಿರಾಕರಿಸಿದ ಬಳಿಕ, ಆರೋಪಿಯು ಯುವತಿ ವಾಸಿಸುತ್ತಿದ್ದ ಹಾಸ್ಟೆಲ್‌ಗೆ ತೆರಳಿ ಆಕೆಯನ್ನು ವಿಚಾರಿಸುವುದು, ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಸೇರಿದಂತೆ ನಾನಾ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಒಂದು ದಿನ ರಾತ್ರಿ ಮನೆಯ ಕೊಟ್ಟಿಗೆಗೆ ಬೆಂಕಿ ಹಚ್ಚಲಾಗಿದ್ದು, ಈ ಕೃತ್ಯಕ್ಕೂ ಆರೋಪಿಯ ಕೈವಾಡ ಇರಬಹುದೆಂದು ಶಂಕಿಸಿ ಕುಟುಂಬದವರು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿ ಎಚ್ಚರಿಕೆ ನೀಡಿದ್ದು, ಮನೆಯವರಿಗೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಲು ಸಲಹೆ ನೀಡಿದ್ದರು ಎನ್ನಲಾಗಿದೆ.
ವಾಮಾಚಾರದ ಹೆಸರಿನಲ್ಲಿ ಆಗಾಗ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ ಕಾರಣ, ಆರೋಪಿಯನ್ನು ದೇವಸ್ಥಾನದ ಸೇವೆಯಿಂದ ವಜಾಗೊಳಿಸಲಾಗಿತ್ತು. ಯುವತಿಯ ಮನೆಯವರ ದೂರಿನ ಆಧಾರದಲ್ಲಿ ಆರೋಪಿಯನ್ನು ಶಿರಸಿಯಲ್ಲಿ ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





















