ಹುಬ್ಬಳ್ಳಿ : ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ರಾಜ್ಯ ಸರ್ಕಾರ ರಾಜಕಾರಣ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಮೇಲೆ ಯಾವುದೇ ಎಫ್‌ಐಆರ್ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಪ್ರಧಾನ ಮಂತ್ರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿರುವ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಸಚಿವರು, ತಮ್ಮ ಜವಾಬ್ದಾರಿಯಿಂದ ನುಣಿಚಿಕೊಂಡಿದ್ದಾರೆ. ಬೇರೆಯವರ ಮೇಲೆ ತಪ್ಪು ಹೊರಿಸುವ ಕೆಲಸವನ್ನು ಸಿಎಂ ಮಾಡಿದ್ದಾರೆ. ನಮ್ಮ ಪಶ್ನೆಗಳಿಗೆ ಕಾಂಗ್ರೆಸ್ ಪಕ್ಷದವರು ಒಂದೇ ಒಂದು ಉತ್ತರ ಕೊಟ್ಟಿಲ್ಲ. ಏ.21ಕ್ಕೆ ಕ್ಲಿಪಿಂಗ್ ಹೊರಬಿದ್ದಿದೆ. ಆದರೆ ಏ.28ರವರೆಗೂ ಪ್ರಜ್ವಲ್ ಮೇಲೆ ಎಫ್‌ಐಆರ್ ಮಾಡಿಲ್ಲ ಏಕೆ? ರಾಜ್ಯ ಸರ್ಕಾರ ಯಾವ ಕಾರಣಕ್ಕಾಗಿ ಪ್ರಜ್ವಲ್ ಮೇಲೆ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂಬುದನ್ನ ಹೇಳಲಿ . ಈ ವಿಡಿಯೋಗಳು ಒಂದು ವರ್ಷ ಅಥವಾ ಆರು ತಿಂಗಳದ್ದಲ್ಲ, 2018 ರಿಂದಲೂ ವಿಡಿಯೋಗಳಿವೆ. ಆ ಸಂದರ್ಭದಲ್ಲಿ ಇದೇ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಪರ ಪ್ರಜ್ವಲ್ ಪ್ರಚಾರ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಇದರಲ್ಲಿ ಕಾಂಗ್ರೆಸ್‌ನಿಂದ ಮತಬ್ಯಾಂಕ್ ಪಾಲಿಟಿಕ್ಸ್ ನಡೆದಿದೆ. ದೇವೇಗೌಡರ ಮೊಮ್ಮಗನನ್ನು ಮುಟ್ಟಿದರೆ ಗೌಡರ ಮತ ಎಲ್ಲಿ ಹೋಗುತ್ತೆ ಅನ್ನೋ ಭಯವಿದೆ. ಹೀಗಾಗಿ ಎಫ್‌ಐಆರ್ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಫ್‌ಐಆರ್ ಮಾಡದೆ ಕೇಂದ್ರ ಸರ್ಕಾರ ಏನಂತ ಕ್ರಮ ಕೈಗೊಳ್ಳಬೇಕು ಎಂದು ಪ್ರಶ್ನಿಸಿದರು.